ಪುಟ:Hosa belaku.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೪

ವೈರಾಗ್ಯ-ವೈಯ್ಯಾರ

ಒಪ್ಪಿಬಿಟ್ಟನು. ಆದರೆ ಫೌಜದಾರರಿಗೆ ಸಂಬಂಧದ ಒಪ್ಪಿಗೆ ಬೇಕಿರಲಿಲ್ಲ. ಕಳುವಿನ ಮೇಲೆ ಬೆಳಕು ಬಿಡಬೇಕಾಗಿತ್ತು.

ಬಾರುಕೋಲು ತನ್ನ ಕೆಲಸ ನಡಿಸಿಯೇ ಇತ್ತು. ಆದರೆ ನನಗೆ ಬೇಕಾದ ಉತ್ತರ ಆಗಲೇ ಸಿಕ್ಕಿ ಹೋಗಿತ್ತು. ಹಾಗೇ ಚಾವಡಿಯಿಂದ ಹೊರಬಿದ್ದೆ. ವಿಚಾರಿಸುತ್ತಲೇ ಮನೆಯತ್ತ ಹೊರಟೆ.

"ವೈಯಾರ-ವೈರಾಗ್ಯ, ಸಂಗಮ ಅಸಾಧ್ಯ." ಗುಡದಪ್ಪನಲ್ಲಿ ವೈರಾಗ್ಯದ ಬೀಜ ಮೊಳಕೆಯೊಡೆದಾಗ ವೈಯಾರ ಅದಕೊಂದು ನಟ್ಟು. ಎರಡೂ ಕೂಡಿ ಇರಬಯಸುವದು ಅಸಾಧ್ಯ.

ನಾನು ಇಷ್ಟು ದಿನಗಳ ವರೆಗೆ ಅವನನ್ನು ತಿರಸ್ಕರಿಸತೊಡಗಿದ್ದೆ. ಅದಕ್ಕೆ ನಾನು ನನ್ನನ್ನೇ ನಿಂದಿಸಿದೆ. ಮನೆ ಮುಟ್ಟುವ ಮೊದಲೇ ಗುಡದಪ್ಪನ ತಾಯಿ ಆ ಹೆಣ್ಣು ಮುದುಕಿಯ ಸ್ಮಶಾನಯಾತ್ರೆ ಎದುರಾಯಿತು. ನಾನು ಆ ಜನಸಮೂಹವನ್ನೆಲ್ಲ ನೋಡಿದೆ. ಆದರೆ ಅಂಥ ಪ್ರಸಂಗದಲ್ಲಿರಬೇಕಾದ ಗುಡದಪ್ಪ ಅಲ್ಲಿರಲಿಲ್ಲ.

"ಗುಡದಪ್ಪನಲ್ಲಿ" ಎಂದು ನಾನು ಒಬ್ಬನನ್ನು ಕೇಳಿದೆ.
"ಊರಲ್ಲಿಲ್ಲ” ಎಂದು ನನಗೆ ಉತ್ತರ ದೊರೆಯಿತು.


ಆ ಮಾತಿಗೆ ಇಂದು ಒಂದು ತಪ ಕಳೆದು ಹೋಗಿದೆ. ಅಂದಿನಿಂದ ಊರವರಿಗೆ ಕಣ್ಣು ಮರೆಯಾದ ಗುಡದಪ್ಪ ಎಲ್ಲಿಯೋ ಯಾವದೋ ಸ್ವಾಮಿಗಳ ಸನ್ನಿಧಾನದಲ್ಲಿ ಶಿಷ್ಯನಾಗಿದ್ದಾನೆಂಬ ಸುದ್ದಿ.

ಅವನ ಜೀವನದ ಹೆಚ್ಚು ಪರಿಚಯವಿಲ್ಲದವರ ದೃಷ್ಟಿಯಲ್ಲಿ ಅವನು ಸಂಸಾರಿಯಾಗಿ ಸನ್ಯಾಸಿ. ನನ್ನ ದೃಷ್ಟಿಯಲ್ಲಿ ಮಾತ್ರ ಗುಡದಪ್ಪ ಮದುವೆಯ ಬಾಸಿಂಗದ ಜತೆಯಲ್ಲಿ ವೈರಾಗ್ಯದ ದೀಕ್ಷೆಯನ್ನು ಹೊಂದಿದ ಸನ್ಯಾಸಿ.