ಪುಟ:Hosa belaku.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡುವಿನ ಪರದೆ.


ದ್ವಿತೀಯ ಮಹಾಯುದ್ಧ ಮುಕ್ತಾಯವಾದ ಕಾಲವದು. ಯುದ್ಧವೇನೋ ಮುಗಿದಿದ್ದರೂ, ಮಲಾಯಾದಲ್ಲಿಯ ಪರಿಸ್ಥಿತಿ ಮಾತ್ರ ತೀರಗಂಭೀರವಾಗಿತ್ತು. ಯುದ್ಧ ಕೈದಿಗಳೆಷ್ಟೋ ವಧಸ್ಥಂಭವನ್ನೇರುತ್ತಿದ್ದ ಭೀಕರದೃಶ್ಯ ಅಲ್ಲಲ್ಲಿ ಕಾಣುತ್ತಿತ್ತು. ಆಹಾರ ಧಾನ್ಯಗಳ ಕೊರತೆಯೊಂದು ಕಡೆ ಈ ಹಗ್ಗದೆಳೆದಾಟದಲ್ಲಿ ಮಲಾಯಾ ನುಚ್ಚುನೂರಾಗುತ್ತಿತ್ತು.

ಮಲಾಯಾದ ರಾಜಧಾನಿಯಾದ ಕೋಲಾಲಂಪೂರದ 72 I.G.H. (ಇಂಡಿಯನ್ ಜನರಲ್ ಹಾಸ್ಪಿಟಲ್)ನಲ್ಲಿ 'A' ವಾರ್ಡಿನಲ್ಲಿ ಕ್ಯಾಪ್ಟನ್ ರಾಮನ್ ನಾಯರ್ ತಮ್ಮ ಮಂಚದಮೇಲೆ ಅಸ್ವಸ್ಥ ಚಿತ್ತರಾಗಿ ಕುಳಿತಿದ್ದರು. ಅದೇ ಆಗಲೇ ಡಾಕ್ಟರರು ಬಂದು ಅವರ ನಾಡಿಯನ್ನು ಪರೀಕ್ಷಿಸಿ, ಹಾಸ್ಪಿಟಲಿನಿಂದ ನಾಳೆ ಬಿಡುಗಡೆಯಾಗುವ ವಿಚಾರ ತಿಳಿಸಿ ಹೋಗಿದ್ದರು. ಜ್ವರದಿಂದ ಮುಕ್ತರಾದಾಗ ಜನರಿಗೆಲ್ಲ ಆನಂದವಾಗುತ್ತದೆ. ಆದರೆ ರಾಮನ್ ನಾಯರರಿಗೆ ಮಾತ್ರ ಬೇಜಾರವಾಯಿತು. ಅವರಿಗೆ ಹಾಸ್ಪಿಟಲ್ ಬಿಡುವ ಮನಸ್ಸೇ ಇರಲಿಲ್ಲ. ಮರುಳುಗಾಡಿನಲ್ಲಿ ಇರುಳೂ ಹಗಲೂ ನಡೆಯುವವನಿಗೆ ಎಲ್ಲಿಯೊ ತಣ್ಣೀರ ಸೆಲೆ ಸಿಕ್ಕಷ್ಟು ಆನಂದ, ರಾಮನ್ ನಾಯರರಿಗೆ ಹಾಸ್ಪಿಟಲಿನಲ್ಲಿ ಆಗಿತ್ತು. ಆದರೆ, ಆಗ ತಾನೆ ಡಾಕ್ಟರರು ತಿಳಿಸಿದ ಬಿಡುಗಡೆಯ ಸುದ್ದಿ ಅವರ ಕರುಳನ್ನೇ ಕತ್ತರಿಸಿ ಬಿಟ್ಟಿತ್ತು. ಯಕ್ಷನನ್ನು ಅವನ ಪ್ರಿಯತಮೆಯಿಂದ ದೂರ ಮಾಡಿದ ಪಾಪದಷ್ಟು ದೊಡ್ಡ ದೋಷವನ್ನು ರಾಮನ್‌ರು ಮನಸ್ಸಿನಲ್ಲಿಯೇ-ಡಾಕ್ಟರರ ಮೇಲೆ ಹೊರಿಸಿದರು. ಇದೇ ವಿಚಾರಗಳ