ಪುಟ:Hosa belaku.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡುವಿನ ಪರದೆ

೮೭


ಮುಂದೆ ತಾನೇ ತನ್ನ ಕೈಗಳಿಂದ, ಬಲುಮೆ ಮಾಡಿ ಕಾಮನ್‌ರಿಗೆ ಔಷಧ ಕುಡಿಸಿದಳು. ಸನಿಯದ ಖುರ್ಚಿಯನ್ನು ಬದಿಯಲ್ಲಿಯೇ ಸರಿಸಿ ಕುಳಿತುಕೊಳ್ಳುತ್ತ ಕೇಳಿದಳು:

“ಏಕೆ? ಇಂದೇಕೆ ಹೀಗೆ ಮಾಡುತ್ತಿದ್ದೀರಿ?” “ಮನಸ್ಸಿನಲ್ಲಿದ್ದುದನ್ನು ಈಗ ಹೇಳಿಬಿಡಲೇ?.” ಎಂದು ರಾಮನ್ ಒಂದು ಸಲ ಯೋಚಿಸಿದರು. ಆದರೆ ತಾನು ಕ್ಯಾಪ್ಟನ್! ಈ ನರ್ಸ್ ಒಂದು ವೇಳೆ ಒಪ್ಪದಿದ್ದರೆ, ತನ್ನ ಗೌರವಕ್ಕೆ ಧಕ್ಕೆ! ಏನಾದರೂ ಉತ್ತರ ಕೊಡಲೇ ಬೇಕಲ್ಲವೆಂದು ರಾಮನ್ರು ಉತ್ತರಿಸಿದರು:

"ನಾಳೆ ಬೆಳಿಗ್ಗೆ ೮|| ಗಂಟೆಗೆ, ಡಾಕ್ಟರರು ನನ್ನನ್ನು ಬಿಡುಗಡೆ ಮಾಡುತ್ತಾರೆ. ಈಗೇನೋ- ನಾನು ಪೂರ್ಣ ಗುಣಮುಖವಾಗಿದ್ದೆನಂತೆ!”

"ಥ್ಯಾಂಕ್ಸ್ ಗಾಡ್! ಅಭಿನಂದನೆಗಳು ! ನೋಡಿ, ಇದು ನನ್ನ ಕೈಗುಣ. ನನ್ನ ಉಪಚಾರವೇ ನಿಮ್ಮನ್ನಿಷ್ಟು ಬೇಗ ವಾಸಿ ಮಾಡಿತು.” ನಗುತ್ತಲೇ ಜಾನಕಿ ಇವೆಲ್ಲ ಮಾತುಗಳನ್ನು ನುಡಿದುಬಿಟ್ಟಳು. ಅವಳ ಕಣ್ಣುಗಳಲ್ಲಿ ಸಂತೋಷ ಕುಣಿಯುತ್ತಿತ್ತು. ಆಗಿನ ಅವಳ ಮುಖಚರ್ಯೆ ನೋಡಿ ರಾಮನ್ ಭೂಮಿಗೆ ಕುಸಿದು ಬಿದ್ದರು. “ನಾನು ಅಪೇಕ್ಷಿಸಿದ ಪ್ರತಿಕ್ರಿಯೆಗೂ ಇದಕ್ಕೂ ಏನೂ ಸಂಬಂಧವಿಲ್ಲವಲ್ಲಾ! ನಾನು ದೂರವಾಗುತ್ತಿದ್ದೇನೆ ಎಂಬುದನ್ನು ಕೇಳಿ, ಇವಳು ವ್ಯಸನಪಡಬಹುದೆಂದು ತಿಳಿದಿದ್ದೆ. ಛಿ! ಸ್ತ್ರೀಯರೆಲ್ಲ ಕಪಟಗಳೇನೋ!” ಎಂದು ವಿಚಾರಿಸುತ್ತಲೇ ರಾಮನ್:

"ಸರಿ, ನೀನು ನನ್ನ ಉಪಚಾರ ತುಂಬ ಮಾಡಿದ್ದೀ, ನಿನಗೇನಾದರೂ ಪ್ರತಿಫಲ ನಾನು ಕೊಡಲೇ ಬೇಕು. ಹೇಳು ಏನು ಬೇಕು? ಮತ್ತೆ ನಿನ್ನ-ನನ್ನ ಭೆಟ್ಟಿ ಎಂದೋ- "ಜಾನಕಿ ತತ್‌ಕ್ಷಣ ರಾಮನ್‌ರ ಬಾಯ ಮೇಲೆ ಕೈ ಇರಿಸುತ್ತ ಉತ್ತರಿಸಿದಳು:

"ಹಾಂ, ಹಾಗೆ ಹೇಳಬೇಡಿ! ಆಶೆ ಅಮರವಾಗಿದೆ. ನಿಮ್ಮಿಂದ ನಾನು ಯಾವ ಪ್ರತಿಫಲದ ಅಪೇಕ್ಷೆಯನ್ನೂ ಮಾಡುವುದಿಲ್ಲ. ಮೇಲಾಗಿ ನೀವು ನನ್ನ ಪ್ರಾಂತದವರೇ ! ನಿಮ್ಮ ಬಗ್ಗೆ ನನಗೆ ಸ್ವಕೀಯ ಭಾವನೆ ಉತ್ಪನ್ನವಾಗಿದೆ.”