ಪುಟ:Hosa belaku.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮

ನಡುವಿನ ಪರದೆ


ಜಾನಕಿಯ ಕೊನೆಯ ಮಾತುಗಳಿಂದ ರಾಮನ್‌ರಿಗೆ ತಡೆಯಲಾಗಲಿಲ್ಲ. ಇಲ್ಲಿಯ ವರೆಗಿನ ತಮ್ಮ ಜೀವಮಾನದಲ್ಲಿ ಹೆಣ್ಣಿನ ಸಂಬಂಧವನ್ನೇ ಅರಿಯದ ರಾಮನ್, ಆ ಮಾತುಗಳಿಂದ, ತಮ್ಮನ್ನು ತಾವೇ ಮರೆತುಹೋದರು. ಜಾನಕಿಯ “ಸ್ವಕೀಯ ಭಾವನೆ” ಈ ಶಬ್ದದ ಜತೆಯಲ್ಲಿ ಮಂಚದಿಂದೆದ್ದು ಜಾನಕಿಯನ್ನು ಬರಸೆಳೆದು ಬಿಗಿದಪ್ಪಿ ಮುದ್ದಿಸಿಬಿಟ್ಟರು. ಸೈನಿಕವೃತ್ತಿಯ ಸಂಯಮನರಹಿತ ನಿರ್ಭಿತ ಜೀವಿ!

ಒಂದು ಕ್ಷಣದಲ್ಲಿ ಏನೋ ಭೂಕಂಪವಾದಂತಾಯಿತು ರಾಮನ್‌ರ ತೋಳಸೆರೆಯಿಂದ ತಪ್ಪಿಸಿಕೊಂಡ ಜಾನಕಿ, ಕೆಂಪಾಗಿ ಹೋಗಿದ್ದಳು. ಅವಳ ತುಟಿ ಥಳಥರ ನಡುಗುತ್ತಿದ್ದುವು. ಅವಳು ಏನನ್ನೋ ಹೇಳಬಯಸುತ್ತಿದ್ದಳು; ಆದರೆ ಮಾತನಾಡಲಾಗಲಿಲ್ಲ. ಒಂದು ದೃಷ್ಟಿಯನ್ನು ರಾಮನ್‌ರತ್ತ ಬೀರಿ, ಮಿಂಚಿನ ವೇಗದಿಂದ ಕೋಣೆಯಿಂದ ಮಾಯವಾದಳು.

ರಾಮನ್‌ರಿಗೆ ಒಂದು ಕ್ಷಣ ಏನೂ ತಿಳಿಯದಾಯಿತು. ತಾನು ಅವಳ ಬಗ್ಗೆ ತಪ್ಪು ಅರ್ಥ ಮಾಡಿಕೊಂಡೆನೆ? ಛೇ! ನನ್ನಲ್ಲಿ ತಮ್ಮ ಬಗ್ಗೆ ಸ್ವಕೀಯ ಭಾವನೆ ಹುಟ್ಟಿದೆ ಎಂದು ಹೇಳುವಾಗ, ಅವಳು ತನ್ನ ಕಡೆಗೆ ಪ್ರೇಮಪೂರ್ಣ ಕಟಾಕ್ಷವನ್ನು ಬೀರಲಿಲ್ಲವೇ? ಹಾಗಾದರೆ…… ಕೋಪಿಸಿಕೊಂಡು ಹೊರಟು ಹೋದಳೇಕೆ? ಇರಬಹುದು, ವೇಳೆ ಕಾಲ ನೋಡದೆ ತಾನು ಅವಳನ್ನು ಚುಂಬಿಸಿದೆನೆಂದು ಇರಬಹುದು. ಆದರೆ ಅವಳು ತನ್ನನ್ನು ಪ್ರೇಮಿಸುತ್ತಾಳೆ. ಇಲ್ಲವಾದರೆ ತನ್ನನ್ನು ಈ ಪರಿಯಾಗಿ ೨೧ ದಿನ ಹಗಲು ರಾತ್ರಿ ಉಪಚರಿಸುತಿರಲಿಲ್ಲ” ಎಂದು ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಳ್ಳಲು ಹವಣಿಸಿದರು.

ನಿಂತುಕೊಂಡೇ ವಿಚಾರ ಮಾಡುತ್ತಿದ್ದ ರಾಮನ್ ಒಂದು ದೀರ್ಘ ಶ್ವಾಸ ಬಿಟ್ಟು, ಮಂಚದ ಮೇಲೆ ಪವಡಿಸಿದರು. ಮತ್ತೆ ಗೋಡೆಯ ಮೇಲಿದ್ದ ಗಡಿಯಾರ ಗಂಟೆಯನ್ನು ಬಾರಿಸಿತು. ರಾಮನ್‌ರ ಮೈ ಮತ್ತೆ ಬೆವರಿತು. ತಮ್ಮ ಬಿಡುಗಡೆಯ ವೇಳೆಯನ್ನು ನಿರೀಕ್ಷಿಸುತ್ತ, ನಿದ್ರೆ ಬಾರದಿದ್ದರೂ ಕಣ್ಣನ್ನು ಮುಚ್ಚಿಕೊಂಡೇ ಮಲಗಿದರು.