ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
96
ನಿರಂಜನ: ಕೆಲವು ಸಣ್ಣ ಕಥೆಗಳು

ಭಾರತ ಸ್ವಾತಂತ್ರ ಸಂಗ್ರಾಮದ ಹಿನ್ನೆಲೆಯ ಬಗೆಗೆ ಅರಸಾಟ ನಡೆಸಿದಾಗ, ಕಳೆದ-ಅಂದರೆ ಸಾವಿರದ ಎಂಟುನೂರರ ಈಚೆಗಿನ-ಅನೇಕ ವೀರಪ್ರೇತಗಳ ಪರಿಚಯ ನನಗಾಯಿತು. ಅವರಲ್ಲಿ ನನ್ನ ಗಮನ ಸೆಳೆದವನು ಧೋಂಡಿಯಾ ವಾಘ್.

೧೮೫೭ರ ಸಿಪಾಯಿ ದಂಗೆಯನ್ನು ಈ ದೇಶದಲ್ಲಿ ಬ್ರಿಟಿಷರಿಗಿದಿರು ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುವುದು ರೂಢಿಗೆ ಬಂದಿದೆ. ಆ ದೃಷ್ಟಿಯಲ್ಲಿ ೧೯೫೭ ಸ್ವಾತಂತ್ರ ಹೋರಾಟದ ಶತಮಾನೋತ್ಸವದ ವರ್ಷವಾಯಿತು. ವಿಜೃಂಭಣೆಯ ಆಚರಣೆಯೂ ನಡೆಯಿತು. ಆದರೆ, ೧೮೫೭ಕ್ಕೂ ಮುಂಚೆ ಆರು ದಶಕ ಕಾಲ ಪರಕೀಯರ ವಿರುದ್ಧ ನಡೆದ ಪ್ರತಿಭಟನೆಯನ್ನು ಅಳಿಸುವುದು ಹೇಗೆ?....ಸೃಜನಶೀಲ ಬರೆಹಗಾರ ಪ್ರೇತಗಳಿಗೆ ಜೀವ ತುಂಬಲು ಯತ್ನಿಸಿದರೆ 'ಹರಕೆಯ ಖಡ್ಗ'ದಂತಹ ಕತೆಗಳು ರೂಪು ತಳೆಯಲೇಬೇಕು.

೧೯೬೫ ಆಗಸ್ಟ್ ೨೯ರ 'ಸುಧಾ' ಸಂಚಿಕೆಯಲ್ಲಿ ಈ ಕತೆ ಮೊದಲು ಪ್ರಕಟವಾಯಿತು. ಸಂಪಾದಕರು: ಇ. ಆರ್. ಸೇತೂರಾಂ, ಎಂ. ಬಿ. ಸಿಂಗ್.