ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಗರ್ಭಿಕರಿಸಿಕೊಂಡಿವೆ. 'ಮೈಖೆಲ್‌ಮಾಸ್ ಪಿಕ್ನಿಕ್ ಕಥೆಯಲ್ಲಿರುವುದು ಆತ್ಮರತಿಯಲ್ಲಿ ತಲ್ಲೀನಳಾದ ಬೆಡಗಿಯೊಬ್ಬಳ ವಿಡಂಬನೆ. ಲಿಲ್ಲಿ- ಮೇರಿ ಎರಡು ಧ್ರುವಗಳು. ಲಿಲ್ಲಿ ವಿಲಾಸಿನಿ, ಸಿಡುಕಿ, ವೈಯಾರ ಹಾವಭಾವ ವಿಭ್ರಮಗಳ ಮೋಹಿನಿ. ಜತೆಗೆ ತನ್ನ ಮೈಮಾಟಕ್ಕೆ ಸಾಟಿಯಿಲ್ಲವೆಂಬ ಕನಸುಣಿ. ತಾನುಂಟೊ ಮೂರು ಲೋಕವುಂಟೆ ಎಂಬ ಧೋರಣೆ ತಳೆದು ಸಡಗರಿಸುವವಳು. ಆಕೆಯನ್ನು ಹೆತ್ತವರು ಅದೇ ಗತ್ತಿನ ಮನೋಧರ್ಮದವರು. ಇಷ್ಟು ಸಾಲದೆಂಬಂತೆ ಲಿಲ್ಲಿಗೆ ಮೇಲು ಕೀಳೆಂಬ ಸಾಮಾಜಿಕ ದೂರಗಳಲ್ಲಿ ಆದರ. ತನಗಿಂತ ಕೆಳಗಿನ ಅಂತಸ್ತಿನವಳಾದ ಮೇರಿಯ ವಿಚಾರದಲ್ಲಿ ಮರುಕವಿಲ್ಲ. ಸಹಪಾಠಿ ಗೆಳತಿಯನ್ನು ಅರ್ಥ ಮಾಡಿಕೊಂಡು ಸ್ಪಂದಿಸಬಲ್ಲ ತಂತಿ ಕಳೆದುಕೊಂಡಿದ್ದಾಳೆ. ವಿನಾಕಾರಣ ಅತೃಪ್ತಳಾಗುತ್ತಾಳೆ. ಅಸಹನೆ ತುಂಬಿ ತುಳುಕುತ್ತದೆ. ಮೇರಿಯ ಅಣ್ಣ ಕಳಿಸಿದ ಹಣ್ಣಿನ ಬುಟ್ಟಿಯನ್ನು ಮುಟ್ಟಲೂ ಆರಳು ಅವಳ ವಿಚಾರ ಕೇಳಲೂ ಆರಳು. ನೆಮ್ಮದಿಯಾಗಿರಲು ಎಲ್ಲ ಅನುಕೂಲಗಳಿದ್ದರೂ ಅಲ್ಲಿ ಅಸುಖಿ. ಮೇರಿ ಇನ್ನೊಂದು ತುದಿ. ಲಿಲ್ಲಿಯಲ್ಲಿ ಮರೆಯಾಗಿರುವ ಮಾನವೀಯ ಅಂಶಗಳು ಮೇರಿಯಲ್ಲಿ ಸೇರಿಕೊಂಡಿವೆ. ಹೊರಗೆ ಹೋಗಿ ಖುಶಿಪಡುವ ವಯಸ್ಸಿನಲ್ಲಿ ಮನೆಯ ಪರಿಸ್ಥಿತಿಗೆ ಎಚ್ಚರವಾಗುತ್ತಾಳೆ. ಬಡತನದ ನಡುವೆಯೂ ಹೃದಯವನ್ನು ಕಳೆದುಕೊಂಡಿಲ್ಲ. ಕಷ್ಟಗಳ ಅಗ್ನಿ ಪರೀಕ್ಷೆಯಲ್ಲಿ ಬೆಳಗುತ್ತಾಳೆ. ಹೀಗೆ ಎರಡು ವೈದೃಶ್ಯಗಳನ್ನು ಒಡ್ಡಿ ಪಾತ್ರಗಳ ಗುಣ ಸ್ವಭಾವಗಳು ಢಾಳಾಗಿ ಕಾಣುವಂತಾಗಿದೆ. ಅಮಾನವೀಯ ಕಿಗಳ ವರ್ತನೆ ಸಾಮಾನ್ಯ ಉಡುಗೆ ತೊಡುಗೆಯಿಂದ ಅಂಕುರಿಸಿ ಪಲ್ಲವಿಸುವುದನ್ನು ಕಲಾತ್ಮಕವಾಗಿ ಚಿತ್ರಿಸಲಾಗಿದೆ. ಘಟನೆಗಳು ಕಡಮೆ. ಭಾವತರಂಗಗಳ ಕ್ರಿಯಾತ್ಮಕ ಚಲನೆಗೆ ಆದ್ಯತೆ ಕೊಡಲಾಗಿದೆ. ಅಂತರಂಗದ ಸುರುಳಿ ಉರುಳಿಸುವುದರಲ್ಲಿ ಕಥೆಗಾರರು ಕುಸುರಿ ಕೆತ್ತನೆ ಕೆಲಸ ಮಾಡಿದ್ದಾರೆ.

'ರಕ್ತ ಸರೋವರ' ಈಗಿನ ಜಮ್ಮು-ಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರದಲ್ಲಿರುವ 'ದಲ್ ತಟಾಕ'ವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತ ಹಂದರ ಹಬ್ಬಿಸಿರುವ ವಿಫಲ ಹೋರಾಟದ ಕಥೆ, ದಲ್ ಸರೋವರ ನೋಡಿದವರ ಕಣ್ಮನಗಳನ್ನು ಸೂರೆಗೊಳ್ಳುವ, ಒಮ್ಮೆ ಅದರಲ್ಲಿ ವಿಹರಿಸಬೇಕೆಂಬ ಆಸೆಗಳನ್ನು ಕೊನರಿಸುವ ಮೋಹಕ ತಟಾಕ, ಅದರಲ್ಲಿ ಅರಳಿದ ಕೆಂದಾವರೆಗಳು ಕಣ್ಣಿಗೆ ಹಬ್ಬ. ಅವು ಸಾಮಾನ್ಯರಿಗೆ ಎಟಕುವ ಹೂಗಳಲ್ಲ. ಅರಳಿಯೂ ಬಾಡಿ ಹೋಗುವ, ಅರಳದೆ ಮುದುಡಿ ಹೋಗುವ ಮಾನವ