15
ಅಭಿನಯ, ಶ್ರೀಸಾಮಾನ್ಯನಿಗೊಮ್ಮೆ ಅಪರೂಪಕ್ಕೆ ಸಿಗುವ ಗೌರವ-ಇವೆಲ್ಲಾ ಪ್ರಭಾವಶಾಲಿಯಾಗಿ ಸಂಭಾಷಣೆಯ ಶೈಲಿಯಲ್ಲಿ ದಾಖಲಾಗಿವೆ. ಪ್ರಾಮಾಣಿ ಕತೆಯ ಪತನ ಹೆಪ್ಪುಗಟ್ಟಿರುವ ಈ ಕಥೆಯಲ್ಲಿ ಪ್ರಜಾಸತ್ತೆಯಲ್ಲಿ ಚುನಾವಣೆ ನಿರ್ವಹಿಸಬೇಕಾದ ಮುಖ್ಯ ಪಾತ್ರ ತನ್ನ ಆರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಕುಸಿಯುತ್ತಿದೆ ಎಂಬುದು ಎಲ್ಲಿಯೂ ವಾಚ್ಯಗೊಳ್ಳದೆ. ಉದ್ದಕ್ಕೂ ಧ್ವನಿತವಾಗುತ್ತದೆ. ತನ್ನ ಪಾವಿತ್ರ್ಯವನ್ನೂ ಮೌಲ್ಯವನ್ನೂ ಬರಿದುಮಾಡಿಕೊಂಡ ವ್ಯವಸ್ಥೆಯ ಭಾಗವಾಗಿ ಕರಗಿಹೋಗದೆ ಒಬ್ಬ ಸಾಮಾನ್ಯ ಪ್ರಜೆ ತಿರು ಕಣ್ಣ ಹೇಗೆ ಅದರ ಹೊರಗೇ ಉಳಿದನೆಂಬ ಧ್ವನಿ 'ತಿರುಕಣ್ಣ ಈ ಸಾರಿ ಓಟು ಪೋಲು ಮಾಡಲಿಲ್ಲ' ಎಂಬ ವಾಕ್ಯದಲ್ಲಿದೆ. ಈ ಸಂಕಲನದ ಮೊದಲಲ್ಲಿರುವ ಬಾಪೂ' ಕಥೆಯೊಂದಿಗೆ ಈ ಕಥೆಯನ್ನು ತೌಲನಿಕವಾಗಿ ಅಭ್ಯಾಸ ಮಾಡಬಹುದು.
ನಿರಂಜನರ ಹಲವು ಕಥೆಗಳಲ್ಲಿ ಕಂಡುಬರುವ ಹಿನ್ನೆಲೆ ತಂತ್ರ ಒಂದೇ ನಾಣ್ಯದ ಎರಡು ಮೈ' ಕಥೆಯಲ್ಲ ಔಚಿತ್ಯಪೂರ್ಣವಾಗಿ ಹೊಂದಿಕೊಂಡಿದೆ. ಉತ್ತಮ ಪುರುಷದಲ್ಲಿ ಇಲ್ಲಿನ ನಿರೂಪಣೆಯಿದೆ. ಸ್ವಾತಂತ್ರ ಪ್ರೇಮ ಕಥೆಗಾರರು ಎರಡನೆಯ ಸಲ ಕಾರವಾರದ ತೀರದಲ್ಲಿ ನಿಂತಾಗ ಹಳೆಯ ಹಿಂದಿನ ನೆನಪುಗಳು ಹೃದಯಪಟಲದ ಮೇಲೆ ಹಾದುಹೋಗುತ್ತವೆ. ಅಂದಿಗೂ ಇಂದಿಗೂ ಸಾಕಷ್ಟು ನೀರು ಹರಿದಿದೆ. ಹಿಂದಿನ ಸಲ ಕಾರವಾರಕ್ಕೆ ಹೋದದ್ದು ದಾಸ್ಯ ವಿಮೋಚನೆಗೆ ಧ್ವನಿಯೆತ್ತಿದ ಅಪರಾಧಕ್ಕಾಗಿ ಸೆರೆಮನೆ ವಾಸಕ್ಕಾಗಿ, ಇಂದಿನ ಬರುವಿಕೆಯೇ ಬೇರೆ. ಸ್ವಾತಂತ್ರ ಬಂದರೂ ಗೋವೆಗಿನ್ನೂ ಬಿಡುಗಡೆ ಸಿಕ್ಕಿರದ ದಿನಗಳು, ಅಲ್ಲಿಗೂ ಬಿಸಿ ತಾಕಿತ್ತು.
ಆದರೆ ಕಥೆಯ ಸ್ವಾರಸ್ಯ ಗರ್ಭಿಕೃತವಾಗಿರುವುದು ಈ ಸ್ಥಿತ್ಯಂತರಗಳ ನಡುವೆಯೂ ಭ್ರಷ್ಟರು ಹೇಗೆ ಅಬಾಧಿತರಾಗಿ ವಿಜೃಂಭಿಸುತ್ತಿರುತ್ತಾರೆ ಎಂಬುದರಲ್ಲಿ. ಅಂದು ಕಾರಾಗೃಹದಲ್ಲಿ ತನ್ನ ಕಡೆಯವರನ್ನು ಸೆರೆಬಿಡಿಸುವ ಅದೇ ಪ್ರಭಾವಶಾಲಿ ಇಂದೂ ತನ್ನ ವರ್ತುಲವನ್ನು ಬದಲಾಯಿಸಿಲ್ಲ. ಕಳ್ಳ ಸಾಗಣೆಯ ಸಾಕು ತಂದೆಯೇ ಈಗ ಕಮಾಂಡರ್ ಆಗಿ ನಿಯಂತ್ರಿಸುತ್ತಿದ್ದಾನೆ. ಇಂಥ ಗೂಂಡಾಗಳ ಯಾಜಮಾನ್ಯದಲ್ಲಿ ಚಳವಳಿಗೆ ದೊರೆತಿರುವ ದುಸ್ಥಿತಿಗಾಗಿ ವಿಷಾದವೆನಿಸುತ್ತದೆ. ಈ ಕಥೆಯಲ್ಲಿ ಬರುವ ವರ್ಣನೆಗಳು ವಿಮರ್ಶಕರ ಗಮನ ಸೆಳೆಯುತ್ತವೆ. ಕಥೆಗಾರರೊಳಗೆ ಕುಳಿತಿರುವ ಕವಿ ಇಲ್ಲಿ ಮೇಲುಗೈ ಪಡೆದಿದ್ದಾನೆ. ದಟ್ಟವಾದ ನಿಸರ್ಗದ ಸುಂದರ ಚಿತ್ರಣ ಚಿತ್ತಾಕರ್ಷಕ ಶೈಲಿಯಲ್ಲಿ ಕಣ್ಣಿಗೆ ಕಟ್ಟುವಂತೆ ಮೂಡಿದೆ.