17
ಲಕ್ಷಾಂತರ ಜನರ ಒಬ್ಬ ಪ್ರತಿನಿಧಿ, ಅವನ ಒಟ್ಟು ಸಂಸಾರ ಹುಟ್ಟಿದ್ದು ಬಾಳಿದ್ದು ಅರಳಿದ್ದು ಮಾಗಿದ್ದು ಬಾಡಿದ್ದು-ಈ ಏರಿಳಿತಗಳ ಉಯ್ಯಾಲೆಯಲ್ಲಿ ಕಥೆ ಜೀಕುತ್ತದೆ. ಹುಟ್ಟಿದ ಮಕ್ಕಳೆಲ್ಲ ಹಡೆದವರ ಹತ್ತಿರ ಉಳಿದಾರೆ! ತಂದೆ ತಾಯಿಯರ ನೋವು ನಲವಿಗೆ ದಕ್ಕುವವರು ಯಾರು? ಇಮಾಮನದು ರೈಲು ನಿಲ್ದಾಣದ ಬದಿಯಲ್ಲೇ ಬೆಳೆದ ಬದುಕು; ಕಷ್ಟ ಸುಖ ರೈಲಿನಂತೆಯೇ ಬರುತ್ತದೆ ಹೋಗುತ್ತದೆ. ತನ್ನ ದೀರ್ಘ ಜೀವನವನ್ನೆಲ್ಲಾ ರೈಲ್ವೆ ಸ್ಟೇಷನ್ನಿನಲ್ಲೇ ಸವೆಸಿದ್ದಾನೆ. ಆದರೆ ರೈಲಿನಲ್ಲಿ ಮಾತ್ರ ಒಮ್ಮೆಯೂ ಪ್ರಯಾಣ ಮಾಡಿರಲಿಲ್ಲ!
ಇಮಾಮ ಶಾಲೆಗೆ ಮಣ್ಣು ಹೊತ್ತವನಲ್ಲ. ತನ್ನ ವಯಸ್ಫೂ ಸರಿಯಾಗಿ ತಿಳಿಯದ ಮುಕ್ಕ, ಕಾಯಕದಲ್ಲೇ ಕೈಲಾಸ ಕಂಡವನು. ಸುಳ್ಳು ತಟವಟಗಳಿಗೆ ದೂರ ಉಳಿದವನು ಬಾಳಿನುದ್ದಕ್ಕೂ ಬಡತನದ ಬುತ್ತಿಯನ್ನು ಬೆನ್ನಿಗೆ ಕಟ್ಟಿಕೊಂಡವನು. ನಿಯತ್ತು ನೇಮ ಉಸಿರಾದವನು, ಒಮ್ಮೆ ಅಚಾನಕ್ ಸೇತುವೆ ಬಿರಿದು ಸಂಭವಿಸಿದ್ದ ರೈಲ್ವೆ ಅವಘಡದಲ್ಲಿ ನಿಸ್ವಾರ್ಥ ಬುದ್ಧಿಯಿಂದ ದುಡಿದವನು, ಅಂದು ನಿಜವಾದ 'ಸೇವೆ' ಸಲ್ಲಿಸಿದ್ದಕ್ಕೆ ಹಣದ ಬೆಲೆ ಕೊಡಲು ಬಂದವರಿಗೆ ಒಪ್ಪದವನು. ಅದು ಏರುಂಜವ್ವನದ ಕಾಲ; ಹಣಕ್ಕೆ ಪ್ರಾಧಾನ್ಯವಿರಲಿಲ್ಲ. ಸಾವಿನ ದವಡೆಗೆ ಸಿಕ್ಕಿ ನರಳುತ್ತಿದ್ದವರ ನೆರವಿಗೆ ಸ್ವಪ್ರೇರಿತನಾಗಿ ಧಾವಿಸಿದ್ದು ಮನುಷ್ಯನಾಗಿ ಮಾಡಬೇಕಾದ ಕರ್ತವ್ಯಪ್ರಜ್ಞೆಯಿಂದ. ಬರಿಗೈಲಿ ಹಿಂತಿರುಗಿದರೂ ನೆಮ್ಮದಿಯ ನಗೆಯಿತ್ತು. ಆದರೆ ಜತೆಯ ಜನ ನುಡಿದ ಕಿಚ್ಚಿನ ನುಡಿಗಳೇ ಬೇರೆ- ಭಾರೀ ಸಂಪಾದನೆ ಆಗಿದ್ದೇಕು!'-ಎಲ್ಲವನ್ನೂ ರೊಕ್ಕದ ಲೆಕ್ಕದಲ್ಲೇ ನೋಡುವ ಜನಕ್ಕೆ ದುಃಖದಲ್ಲಿರುವವರೂ ಒಂದೆ, ಸುಖದಲ್ಲಿರುವವರೂ ಒಂದೆ. ಕತ್ತಲು ಬೆಳಕುಗಳಿಗೆ ವ್ಯತ್ಯಾಸವನ್ನೇ ಗುರುತಿಸದವರ, ಮನುಷ್ಯ ಸಂಬಂಧಗಳಿಗೆ ಬೆಲೆಯೇ ಇಲ್ಲದವರ ಬಾಯಲ್ಲಿ ಬೇರೆ ಮಾತು ಬರುವುದಾದರೂ ಹೇಗೆ?
ಸಾಮಾಜಿಕವಾಗಿ ಕೆಳಗಿನ ಸ್ತರದಲ್ಲಿರುವ ಹವಾಲನಾದ ಇಮಾಮನ ಚಿತ್ರ ಸಂಸ್ಕಾರದ ಎತ್ತರವೇ ಬೇರೆ. ಆತ ಹೃದಯವಂತ. ಕೇವಲ ಕಾಸಿಗಾಗಿ ಕೆಲಸ ಮಾಡುವ, ಕಾಸಿಗೆ ತಕ್ಕ ಕಜ್ಜಾಯ ಕೊಡುವ ವ್ಯವಹಾರಿಯಲ್ಲ, ಶ್ರೀಮಂತರು ಸ್ವಯಿಚ್ಛೆ, ಸ್ವಸಂತೋಷದಿಂದ ಹಣಕೊಡಲು ಮುಂದಾದಾಗಲೂ ಬೇಡವೆಂದವನು, ಕೂಲಿಯವನು ನಿಜ, ಆದರೆ ವಿನಾಕಾರಣ ಹಾಗೂ ನಿಗದಿತ ಮೊತ್ತಕ್ಕೆ ಮೀರಿ ಪಡೆಯುವುದು ಪಾಪ. ಈ ನೆಲೆಯಲ್ಲಿ ಇಮಾಮ ದೊಡ್ಡವ, ಘನಂದಾರ, ಓದುಗರ ಗೌರವಾಭಿಷೇಕಕ್ಕೆ ಪಾತ್ರನಾಗುವವನು.