ಪುಟ:KELAVU SANNA KATHEGALU.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

2 ನಿರಂಜನ: ಕೆಲವು ಸಣ್ಣ ಕಥೆಗಳು


ಆದರೆ ರಾಜಾರಾಮ್‌ಜಿ ರಾಷ್ಟ್ರೀಯವಾದಿಗಳು. ಅವರ ಉಡುಗೆ ಯಂತ್ರ ಕೃತವಾದರೂ ತಲೆಯಮೇಲೊಂದು ಖಾದಿಯ ಟೊಪ್ಪಿಗೆ ಇದೆ. ಕೇಂದ್ರ ಸರಕಾರದ ಅನುಜ್ಞೆ ಅದು: "ದಿವಂಗತ ಬಾಪೂಜಿಯವರ ಸ್ಮಾರಕವಾಗಿ ಎಲ್ಲರೂ ಸದಾ ಕಾಲವೂ ಖಾದಿ ಟೋಪಿಗಳನ್ನು ಧರಿಸಬೇಕು!"

****

ವಿಜ್ಞಾನದ ಕೈಮಾಟ. ಎಲ್ಲೆಲ್ಲೂ ವಿದ್ಯುತ್ ಸಂಚಾರ.

ಆ ನಿರ್ಮಾಣ ಗೃಹದ ದೃಷ್ಟಿಯಿಡಿ. ಈ ನಾಡಿನ 'ಸ್ವಾತಂತ್ರ್ಯ' ರಕ್ಷಣೆಗಾಗಿ ಅಲ್ಲಿ ಯುದ್ಧ ಸಾಮಗ್ರಿಗಳ ಸಿದ್ಧತೆಯಾಗುತ್ತಿದೆ. ಶ್ರೀಮೂರ್ತಿಯವರ ಯೋಜನೆಯಂತೆ ಬಾಪೂಜಿಯವರ ತೈಲಚಿತ್ರ ಅಲ್ಲಿಯೂ ಆ ಯಂತ್ರಗಳೆಡೆಯಲ್ಲಿಯೂ ಕಾಣಬರುತ್ತಿದೆ. ಹಶ್! ದಿವಂಗತರಿಗೆ ಸ್ಮಾರಕ ಅದು...

ನಮ್ಮ ನಾಡಿನ ಹಣವಿನ್ನು ಪರದೇಶಗಳಿಗೆ ಹೋಗದು. ಪರರ ಹಣ ನಮಗೆ ಬರಬೇಕು. ಅದಕ್ಕಾಗಿ ಅರ್ಥಾತ್ 'ಸ್ವಾತಂತ್ರ' ರಕ್ಷಣೆಗಾಗಿ, ಸಿದ್ಧತೆ. ಶಸ್ತ್ರ ತಯಾರಿಯ ಸ್ಪರ್ಧೆ!

****

ಸೇ‌ಠ್‌ಜಿ ನಿದ್ರಿಸಿದ್ದರು; ಅವರ ಗುಡಾಣ ಹೊಟ್ಟೆ ನಿದ್ರಿಸುತ್ತಿತ್ತು.

ಏನೋ ದುಃಸ್ವಪ್ನ ಬಿತ್ತು. ಸೇ‌ಠ್‌ಜಿ ಆ ಅಂಧಕಾರದಲ್ಲಿ ಎವೆ ತೆರೆದರು.

ಕೋಣೆಯ ಮೂಲೆಯಲ್ಲೊಂದೆಡೆ ಕೊಂಚ ಮಸುಕುಮಸುಕಾಗಿ ಬೆಳಕು ಕಾಣಬಂದಿತು. ಬಳಿಕ ಅದು ಪ್ರಕಾಶಮಾನವಾಯಿತು. ಸೇ‌ಠ್‌ಜಿ ಅತ್ತನೋಡಿ ಒಂದು ನುಣ್ಣನೆಯ ಕೇಶಹೀನ ತಲೆಯನ್ನು ಕಂಡರು. ಅದು ಮುಖತಿರುಗಿಸಿ ನಿಂತಿದ್ದಿತು.

"ಆ!" ಎಂದು ಸೇ‌ಠ್‌ಜಿ ಕಿರಿಚಿದರು.

ಆ ತಲೆ ಅವರತ್ತ ಹೊರಳಿತು. ಅದು ಶುಭ್ರವಾಗಿ ಪ್ರಜ್ವಲಿಸುತ್ತಿತ್ತು. ಮುಂದಕ್ಕೆ ಬಂದ ಮೂಗು, ಹಲ್ಲಿಲ್ಲದ ಬಾಯಿ, ಸುಕ್ಕುಬಿದ್ದ ಮುಖದೊಗಲು,

"ಬಾಪೂಜಿ!... ನಮಸ್ತೆ..." ಎಂದರು ಸೇ‌ಠ್‌ಜಿ, ಕೃತ್ರಿಮ ಮಧುರತೆಯಿಂದ ಮಾತಾಡಲು ಅವರು ಯತ್ನಿಸಿದರು. ಆದರೂ ಅದು ಕರ್ಕಶವಾಗಿಯೇ ಇತ್ತು.

ಆ ತಲೆ ತಾನು ಬಾಪೂಜಿ ಎಂಬಂತೆ ಮೇಲಕ್ಕೂ ಕೆಳಕ್ಕೂ ಅಲುಗಾಡಿತು.

ಸೇ‌ಠ್‌ಜಿ ಪಾದಸ್ಪರ್ಶಕ್ಕೆಂದು ಮುಂದಕ್ಕೆ ನೆಗೆದರು. ಆ ರುಂಡದ ಮುಖದ ಮೇಲಿನ ವಿಚಿತ್ರ ನಗುವನ್ನು ಕಂಡು ದಂಗಾದರು. ಆ ನಗುವಿನಲ್ಲಿ ತಿರಸ್ಕಾರವಡಗಿತ್ತು.