ಪುಟ:KELAVU SANNA KATHEGALU.pdf/೫೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
ಕೊನೆಯ ಗಿರಾಕಿ
29
 

ಆಕೆ ನೋವು ತಡೆಯಲಾರದೆ “ವೆ ವೆ ವೇ ವೆ” ಎಂದು ಪ್ರತಿಭಟಿಸಿದಳು.
ಎರಡೂ ಕೈಯಿಂದ ದಬ್ಬಿ ಅವನನ್ನು ಕೆಳಕ್ಕೆ ಬೀಳಿಸಿದಳು. ರಂಪವಾಯಿತು.
ಆಕೆಯ ಯಜಮಾನನು ಬಡ ನಾಯಿಗೆ ಹೊಡೆವ ಹಾಗೆ ಆಕೆಗೆ ಬಡೆದ. ಆಕೆ
ಮುದುಡಿಕೊಂಡು ಮೂಲೆಯಲ್ಲಿ ಬಿದ್ದಳು. ಬಂದವರು ಮುಖ ಸಿಂಡರಿಸಿಕೊಂಡು
ಹೊರಟುಹೋದರು.
ನಡುರಾತ್ರೆ ಆತ, ಬಿದ್ದಿದ್ದ ಜಾಗದಿಂದ ಆಕೆಯನ್ನೆತ್ತಿ ಚಾಪೆಯ ಮೇಲೆ
ಇರಿಸಿದ. “ನೋವಾಯಿತೇ? ನೋವಾಯಿತೇ?” ಎಂದ. ಆಕೆ ಏನನ್ನೂ ಹೇಳ
ಲಿಲ್ಲ. ಕಣ್ಣುಗಳಲ್ಲಿ ಮಾತ್ರ ಏನೇನೋ ವಿವಿಧ ವಿಕಾರಗಳಾಗುತ್ತಿದ್ದುವು. ಆದರೆ
ಆ ಅಲ್ಪ ಮಾನವನಿಗೆ ಅದರ ಅರ್ಥವಾಗಲಿಲ್ಲ.
ಅಂದಿನಿಂದ ಕಾಣಿ ಬಲು ಮೆದುವಾದಳು.
ಆತನನ್ನು ಆಕೆ ಪ್ರೀತಿಸಲಿಲ್ಲ. ಮೊದಲ ಸಾರೆ ಮೊಂಡು ಕೈ ಯವನನ್ನು
ಪ್ರೀತಿಸಿದ ಹಾಗೆ ಯಾರನ್ನೂ ಆಕೆ ಪ್ರೀತಿಸಲಿಲ್ಲ.
ದುಡ್ಡಿನ ಬೆಲೆ ಕಾಣಿಗೆ ತಿಳಿಯದು. ಎಷ್ಟು ಬರುತ್ತಿತ್ತೋ ಏನೋ.
ಎರಡು ಸೀರೆ-ರವಕೆ, ಜಂಪರ್, ರಾತ್ರೆ ಹೊರಹೋಗುವಾಗ ಹಾಕಿಕೊಳ್ಳಲು
ತೂತಾಗಿದ್ದ, ಆದರೆ ಉಣ್ಣೆಯ, ಸ್ತ್ರೀ ಕೊಟ್ಟು; ಮುಡಿಯಲು ಹೂ; ಮೂಗಿಗೆ
ಹೊಡೆಯುವ ಎಣ್ಣೆ - ಕೂದಲಿಗೆ; ಹೊಟ್ಟೆ ತುಂಬ ಊಟ-ತಿಂಡಿ... ಹಾಗೆ ದಿನ
ಕಳೆಯಿತು.
ಸದ್ಯಃ ಆಕೆ ಬಸುರಿಯಾಗಲಿಲ್ಲ!
ಇಷ್ಟಿದ್ದರೂ ಒಂದು ದಿನ ಆಕೆಗೆ ಎದೆ ನೋವಾಯಿತು. ಹೊರಳಾಡಿದಳು.,
ವಿಲಿವಿಲಿ ಒದ್ದಾಡಿದಳು. ತನ್ನ ಹಳ್ಳಿಯ, ತಾನು ಹುಟ್ಟಿದ ಗುಡಿಸಲಿನ ತನ್ನ
ಭಾಷೆಯಾಡುವ ಜನರ, ಮೊಂಡುಕೈಯ ಮೊದಲ ಜತೆಗಾರನ ನೆನಪಾಯಿತು.
ಓಹೋ ಓಓ- ಎಂದೆಲ್ಲ ಸ್ವರವೆತ್ತಿದಳು. ಎರಡು ದಿನವೂ ರಾತ್ರೆಯೂ ಹೀಗೇ
ಆಯಿತು. ಗಿರಾಕಿಗಳು ಬರುವುದಾಗಲೇ ಇಲ್ಲ.
ಮೂರನೆಯ ಬೆಳಗು ಮುಂಜಾನೆ, ಅಲ್ಲಿದ್ದ ತಿಂಡಿಯನ್ನೆಲ್ಲ ಬಟ್ಟೆಬರೆಯ
ನೆಲ್ಲ ಕಟ್ಟಿಕೊಂಡು ಆಕೆ ಓಡಿಹೋದಳು. ನಗರದ ಇನ್ನೊಂದು ಅಂಚನ್ನು
ತಲಪಿ ಅದನ್ನೂ ದಾಟಿದಳು.
ದಾಟಿ ಮುಂದೆ ನಡೆದುದೊಂದು ಹಳ್ಳಿಗೆ. ಹೊಲ, ಉಳುತ್ತಿದ್ದ ಒಂದು
ಜೊತೆ ಎತ್ತು, ರೈತರು...ಎಲ್ಲವನ್ನೂ ಆಕೆ ಮೌನದಿಂದ ನೋಡಿದಳು. ಕೆದರಿದ
ತಲೆಕೂದಲನ್ನು ಬಾಚುವುದೂ ನೆನಪಾಗಲಿಲ್ಲ ಆಕೆಗೆ.ಒಂದಾಣೆಯ ಪುಟ್ಟ ಕನ್ನಡಿ