ಪುಟ:KELAVU SANNA KATHEGALU.pdf/೫೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೩೦ ನಿರಂಜನ: ಕೆಲವು ಸಣ್ಣ ಕಥೆಗಳು


ಯಲ್ಲಿ ತನ್ನ ಪ್ರತಿರೂಪವನ್ನು ನೋಡುವ ಬಯಕೆಯೂ ಆಗಲಿಲ್ಲ. ತಿಂಡಿ ತಿನ್ನುವುದೂ ಬೇಕೆನಿಸಲಿಲ್ಲ.
ಮಳೆಹನಿ ಬಿದ್ದು ಸುತ್ತಲಿನ ನೆಲವೆಲ್ಲ ಹಸುರಾಗಿತ್ತು. ಚಿಗುರು ಹುಲ್ಲಿನ ಮೇಲೆ ಕಾಣಿ ಒಂದೆಡೆ ಕುಳಿತಳು.
ತನ್ನ ಬಾಲ್ಯದ ನೂರೊಂದು ನೆನಪುಗಳು ಒತ್ತರಿಸಿ ಬಂದುವು. ಮುಖ ಸಣ್ಣದಾಯಿತು. ನಿಧಾನವಾಗಿ ಜೊಂಪು ಹತ್ತಿ ಅಲ್ಲೆ ಒರಗಿ ನಿದ್ದೆಹೋದಳು.
ಸಂಜೆ, “ಶ್ ಶ್ ಏಯ್ ಏಯ್” ಎಂದು ಕೆಲವು ರೈತ ಹೆಂಗಸರು ಎಬ್ಬಿಸಿದಾಗಲೇ ಆಕೆ ಕಣ್ಣು ತೆರೆದದ್ದು.
ಕತ್ತಲಾದಂತೆ ಆ ಹಳ್ಳಿಯಲ್ಲಿ ಆಕೆಗೆ ಹೆದರಿಕೆಯಾಯಿತು. ಧಾವಿಸುತ್ತ ಧಾವಿಸುತ್ತ ಕಾಣಿ ನಗರ ಸೇರಿದಳು.
ಒಂದು ಕೊನೆಯಲ್ಲಿ ಆ ಶಾಲೆ ಇತ್ತು. ರಾತ್ರಿ ಅಲ್ಲಿ ಯಾರೂ ಇರುತ್ತಿರಲಿಲ್ಲ, ಅಲ್ಲಿಯೇ ಜಗಲಿಯ ಒಂದು ಮೂಲೆಯಲ್ಲಿ ಆಕೆ ಮಲಗಿದಳು.
* * * *
ಬೆಳಗಾದೊಡನೆಯೆ ಎದ್ದು ಹೋದಳಾಕೆ. ಹೋಗುತ್ತ ಮೈಮೇಲಿನ ಬಟ್ಟೆ ಸರಿಪಡಿಸಿಕೊಂಡಳು; ಕೊಂಚಮಟ್ಟಿಗೆ ಸಿಂಗರಿಸಿಕೊಂಡಳು.
ಹಾಗೆಯೇ ಸುತ್ತಾಡಿದಾಗ ಆ ಜಾಗದ ಪರಿಚಯವಾಯಿತು. ವಿಸ್ತಾರ ಭೂಮಿ-ಸುತ್ತಲೂ ಹಸುರು ಹುಲ್ಲು. ಅಲ್ಲೆ ಆ ಸರ್ಕಲ್-ಅದರ ನಡುವಿನಲ್ಲಿ ಕಾರಂಜಿ, ಯಾರದೋ ಒ೦ದು ಪ್ರತಿಮೆ. ದೂರದಲ್ಲಿ ಒಂದೇ ಒಂದಾದ ಯಾವುದೋ ದೊಡ್ಡ ಕಟ್ಟಡ.
ಮೂಲೆಯಲ್ಲಿ ಕಡಲೆಕಾಯಿ ಮಾರುತ್ತ ಕುಳಿತಿದ್ದವನೊಬ್ಬನಿಗೆ ಇದ್ದ ಪುಡಿ ಕಾಸು ಸುರಿದು, ಕಾಸಿನ ಬೆಲೆ ಏನೆಂಬುದನ್ನು ಆ ಮೂಕಿ ಕಲಿತಳು.
ಹಸಿವು ಇಂಗಲಿಲ್ಲ.
ಕತ್ತಲಾದಾಗ ಆ ಸರ್ಕಲಿನ ಬಳಿ ಹೋಗಿ ಒಂದು ಮೂಲೆಯಲ್ಲಿ ಕುಳಿತಳು. ಕೇಂದ್ರದ ಒಂದೇ ಒಂದು ದೀಪದಿಂದ ಮಂದ ಪ್ರಕಾಶವಷ್ಟೆ ಬೀಳುತ್ತಿತ್ತು. ಹಾದುಹೋಗುತ್ತಿದ್ದವರು ಆಕೆಯನ್ನು ನೋಡಿ ಹೋಗುತ್ತಿದ್ದರು. ನೋಡಿದ ಒಬ್ಬಿಬ್ಬರು ಮುಂದೆ ಹೋದ ಬಳಿಕ ತಿರುಗಿ ನೋಡುತ್ತಿದ್ದರು.
ಗಂಭೀರನಾಗಿ ಕಾಣುತ್ತಿದ್ದ ಮನುಷ್ಯನೊಬ್ಬ ಕನ್ನಡಕವನ್ನು ಸರಿಪಡಿಸುತ್ತ ಆ ಹಾದಿಯಲ್ಲಿ ಎರಡು ಬಾರಿ ಸುಳಿದ. ಕಾಣಿ ಎದ್ದು ನಿಂತು ಸರ್ಕಲಿನಿಂದ ಹೊರಕ್ಕೆ ಬಯಲಿನತ್ತ ನಡೆದಳು-ಎಲ್ಲೋ ಮರದತ್ತ. ಯಾವುದೋ ಪೊದೆಯ ಬಳಿಗೆ. ಆ ಮನುಷ್ಯ ಹಿಂದೆ ಮುಂದೆ ನೋಡುತ್ತ ಆಕೆಯನ್ನು ಹಿಂಬಾಲಿಸಿದ.