ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
32
ನಿರಂಜನ: ಕೆಲವು ಸಣ್ಣ ಕಥೆಗಳು

ಆಕೆ ದೂರದಲ್ಲಿ ಬಳಕುತ್ತ ನಡೆಯುತ್ತಿದ್ದರೆ, ಆ ಉಣ್ಣೆ ಕೋಟನ್ನು
ಧರಿಸಿದ್ದರೆ, ತಲೆಗೆ ಹೂ ಮುಡಿದಿದ್ದರೆ, ಸುಮಾರಾಗಿ ಕಾಣಿಸುತ್ತಿದ್ದಳು. ಆದರೆ
ಹತ್ತಿರದಲ್ಲಿ ಮುಖವಿಟ್ಟು ನೋಡಿದರೆ, ಎರಡು ಕಣ್ಣುಗಳಲ್ಲಿ ಎರಡು ದೆವ್ವಗಳು
ನರ್ತಿಸುತ್ತಿದ್ದಂತೆ ತೋರುತ್ತಿತ್ತು.
ಕೆಲವು ಪುಂಡರು ಆಕೆ ಮಲಗುತ್ತಿದ್ದ ಶಾಲೆಗೆ ಬರುತ್ತಿದ್ದರು ರಾತ್ರೆ
ಹೊತ್ತು. ಆದರೆ ಪುಡಿಕಾಸು ಬಿಚ್ಚುತ್ತಿರಲಿಲ್ಲ. ಆಕೆ ಜಗಳಾಡುತ್ತಿದ್ದಳು.
ಅವರೂ ಪೀಡಿಸಿ ಬಲಾತ್ಕರಿಸುತ್ತಿದ್ದರು. ಅವರ ನಗೆಯೊ-ವಿಕಟ ಅಟ್ಟಹಾಸವೊ!
ಪ್ರತಿಭಟನೆ ವಿಫಲವಾದಾಗ ಕಾಣಿ ತೇಕುತ್ತ ತೇಕುತ್ತ ಆದದ್ದಾಗಲೆಂದು ತಲೆ
ಬಾಗುತ್ತಿದ್ದಳು.
ಜ್ವರ ಹೆಚ್ಚಿತು. ಕೆರೆಯಲ್ಲಿ ಸ್ನಾನಮಾಡಬೇಡವೆಂದು ಆಕೆಯ ಮನಸ್ಸು
ಹೇಳಿದಂತಾಯಿತು.
ಚರ್ಮಕ್ಕೇನೋ ರೋಗ ಬಡಿಯಿತು. ಯುವತಿ ಕಾಣಿ ತುಂಬ ನರಳಾ
ಡಿದಳು.
ಮೈಯಿಂದ ಕೆಟ್ಟ ವಾಸನೆ ಬರತೊಡಗಿತು.
ಕಾಣಿ ಇರುವ ತಾಣ ಬದಲಿಸಿದಳು. ಒಂದು ಫರ್ಲಾಂಗಿನಾಚೆ ಇದ್ದ
ಮುರುಕು ಮನೆಯೊಂದರ ಬಳಿಗೆ ಹೋದಳು. ಅಲ್ಲೊಬ್ಬ ನಡುವಯಸ್ಸಿನ
ಭಿಕ್ಷುಕ ತನ್ನ ಅರಮನೆ ಕಟ್ಟಿಕೊಂಡಿದ್ದ.
ಆತ ಮೂರು ದಿನ ಅವಳಿಗಿಷ್ಟು ಗಂಜಿ ನೀಡಿದ.
ಆಕೆ, ಮುರಿದಿದ್ದ ಮಾಡಿನೆಡೆಯಿಂದ ಆಕಾಶದತ್ತ ಬಿರಬಿರನೆ ನೋಡುತ್ತ
ಮಲಗಿದಳು.
ನಾಲ್ಕನೆಯ ದಿನ ಜ್ವರ ಸ್ವಲ್ಪವಾಸಿ ಎಂದು ತೋರಿತು. ಆಕೆ ಎದ್ದು
ಕುಳಿತಳು. ಆ ಭಿಕ್ಷುಕ, ಆಸೆಯಿಂದ ಅವಳ ಕಡೆ ನೋಡಿದ. ಆಕೆಯ ಮುಖದ
ಮೇಲೆ ಯಾವ ಭಾವನೆಯೂ ಇರಲಿಲ್ಲ, ಅಂಥ ಭಾವನೆಗಳನ್ನು ಅನುಭವಿಸುವ
ಸಾಮರ್ಥ್ಯವೆಲ್ಲ ಆಕೆಯಲ್ಲಿ ನಶಿಸಿಹೋಗಿತ್ತು. ಆತ ಆ ದಿನ ಭಿಕ್ಷುವೆತ್ತುವು
ದಕ್ಕೂ ಹೋಗದೆ ಅವಳೊಡನೆಯೇ ಇದ್ದು ಬಿಟ್ಟ. ರೋಗಪೀಡಿತವಾಗಿದ್ದ ಆತನ
ದೇಹ, ಬಹಳ ದಿನ ಬಯಕೆಯನ್ನು ಈಡೇರಿಸಹೊರಟಿತ್ತು.
ಸಂಜೆ ಕಾಣಿ, ತನ್ನ ಕರಿಯ ಕೋಟನ್ನು ಹೊದ್ದುಕೊಂಡು, ನಿಧಾನವಾಗಿ
ನಡೆಯುತ್ತ ಹುಲ್ಲುಗಾವಲನ್ನು ದಾಟಿ, ಸರ್ಕಲಿನತ್ತ ಹೋಗಿ, ಕತ್ತಲೆಯಿದ್ದ ಆ
ಒಂದು ಮೂಲೆಯಲ್ಲಿ ನಿಂತಳು. ಆಕೆಗೆ ಬವಳಿ ಬಂದ ಹಾಗಾಗುತ್ತಿತ್ತು. ಊರಿನ
ಹೊಲ, ತಾಯಿ-ತಂದೆ, ಮೊಂಡು ಕೈಯ ಜೊತೆಗಾರ, ಇವರೆಲ್ಲ ಕಣ್ಣ ಮುಂದೆ