ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
36
ನಿರಂಜನ: ಕೆಲವು ಸಣ್ಣ ಕಥೆಗಳು

“೯ಎ೦೦೬೮೩ ತಿರುಕಣ್ಣನ್ ಮತ್ತು ೯ಎ೦೦೬೮೪ ಆರೋಗ್ಯಮ್ಮ”
ತಿರುಕಣ್ಣನಿಗೆ ಅರ್ಥವಾಗಲಿಲ್ಲ. ಆತ ವಿನೀತನಾಗಿ ಕೇಳಿದ:
“ನನ್ನಿಂದೇನು ಮಾಪರಾಧವಾಯ್ತು ಸ್ವಾಮಿ?”
“ಛೇ! ಏನೂ ಇಲ್ಲ.......ಇಕೋ ಇವರು ಸ್ವತಂತ್ರ ಭಾರತದ ಸ್ವತಂತ್ರ
ಚುನಾವಣೇಲಿ ಸ್ವತಂತ್ರ ಉಮೇದುವಾರರು.ಇವರಿಗೆ ನೀನೂ ಓಟು ಮಾಡ
ಬೇಕು, ನಿನ್ನ ಹೆಂಡತಿಯೂ ಓಟು ಮಾಡಬೇಕು. ಗುರುತು ಕಾರು. ಕಾರು
ಗುರುತು...”
“ಅದೆಂಥಾದೋ ತಿಳೀಲಿಲ್ವೆ ಬುದ್ಧಿ.”
ಮತ್ತೊಮ್ಮೆ ಆತ ಸಹನೆಯಿಂದ ವಿವರಿಸಿದ:
“ನಾನು ನನ್ನ ಹೆಂಡ್ತಿ, ಅದ್ದೆಂಗೆ?”
“ಯಾಕೆ?”
“ಅವಳಿಲ್ವಲ್ಲಾ!”
“ಎಲ್ಲಿಗೋಗವ್ಳೆ?”
“ಬರೋ ಹಂಗೇ ಇಲ್ವಲ್ಲಾ!”
“ಏನು ಸಮಾಚಾರ?”
ಸ್ವಲ್ಪ ತಡೆದು ತಿರುಕಣ್ಣನ್ ಹೇಳಿದ:
“ಹಯ್ಯೋ ಒಂಟೋದ್ಧಲ್ಲಾ ಬುದ್ದಿ ಒಂದು ವಾರದ ಇಂದೇನೇ.....
ಭೇದಿ ಅತ್ಕೊಂಡಿತ್ತು. ಅಂಗೇ ಒಂಟೋದ್ಲಲ್ಲಾ...”
“ಅಯ್ಯೋ ಪಾಪ! ಎಂಥ ಅನ್ಯಾಯ!”
ತನ್ನ ಬಗ್ಗೆ ಕನಿಕರ ತೋರಿಸುತ್ತಿದ್ದಾರೆ ಎಂದುಕೊಂಡ ತಿರುಕಣ್ಣನ್.
“ಎಂಥ ಅನ್ಯಾಯ! ನಮ್ಮ ಒಂದು ಸೂರ್ ಓಟು ಹೊರಟೋಯ್ತಲ್ಲಾ!”
ತಿರುಕಣ್ಣನಿಗೆ ಆಶ್ಚರ್ಯವಾಯಿತು. ಇನ್ನೊಬ್ಬ ಕೇಳಿದ:
“ಯಾವ ಮಿಲ್ಲಿಗಪ್ಪಾ ನೀವು ಹೋಗಿರೋದು?”
“ಅದೂ ಆಗೋಯ್ತು ಬುದ್ಧಿ. ಮನೆಗೆ ಕಳಿಸ್ಬುಟ್ರು ನಾಕ್ತಿಂಗ್ಳಾಯ್ತು..
ಅದೇನೋ ತುಂಬಾ ಕಾಯಿಲೆಯಾಗಿತ್ತು. ಇಳಿದೋಗ್ಬಿಟ್ಟಿದ್ದೆ. 'ಈ ಕಾಯಿಲೆ
ವಾಸೀನೇ ಆಗಂಗಿಲ್ಲ-ಹೊರಟೋಗು' ಅಂದ್ರು.”
“ಎಂಥ ಅನ್ಯಾಯ! ಇದಕ್ಕೊಸ್ಕರವೇ ನಮ್ಮ ಯಜಮಾನರು
ಎಲೆಕ್ಷನ್‌ಗೆ ನಿಂತಿದ್ದಾರೆ. ಆರೋಗ್ಯಮ್ಮನ ಓಟಂತೂ ಅನ್ಯಾಯವಾಗಿ
ಹಾಳಾಯ್ತು. ನಿನ್ನ ಓಟನ್ನು ಅವರಿಗೆ ದಯಪಾಲ್ಸು” ಇನ್ನೊಬ್ಬ ಹೇಳಿದ.
"ಅಂಗೇ ಆಗ್ಲಿ ಬುದ್ಧಿ.”