ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ತಿರುಕಣ್ಣನ ಮತದಾನ
39

“ತಿರು-ಕಣ್ಣಾ” ಎಂದೊಬ್ಬನು ಕೂಗಿದರೆ, “ತಿರುಕಣ್ಣ ಇದ್ದಾರೆಯೆ?”
ಎಂದಿನ್ನೊಬ್ಬ ರಾಗವಾಗಿ; ಮೂರನೆಯವನು "ತಿರ್ಕಣ್ಣನ್ ಇರ್ಕಾರಾ?”ಎಂತ.

“ಆಗಲಿ ಸಾಮಿ, ಆಗಲಿ ಬುದ್ಧಿ, ಕೊಡ್ತೀನಿ ಓಟು” ಎಂದು ಹೇಳಿ
ಹೇಳಿ ತಿರುಕಣ್ಣನಿಗೆ ಸಾಕಾಗಿ ಹೋಯಿತು.

.... ಮೈಯ ನಿಶ್ಯಕ್ತಿ ಹೆಚ್ಚುತ್ತಿತ್ತು. ರೇಷನ್ ತರಲು ಸಾಕಷ್ಟು ಹಣವೇ
ಇರುತ್ತಿರಲಿಲ್ಲ. ಹೆಂಡದಂಗಡಿಯವನು, “ನಿನಗಿನ್ನು ಸಾಲ ಕೊಡೋಕಾಗಲ್ಲ,
ಕಾರ್ಖಾನೇಲಿ ಕೆಲ್ಸ ಇದ್ದವರಿಗಷ್ಟೇ ಸಾಲ, ಹೋಗು” ಎಂದು ಖಡಾಖಂಡಿತ
ವಾಗಿ ಹೇಳಿದ್ದ.

ಗುಡಿಸಲಿನ ಬಾಡಿಗೆ ಎರಡು ತಿಂಗಳಿಂದ ಬಾಕಿ ಇತ್ತು. ಅದರ ಮಾಲಿಕ
ಹೋದ ತಿಂಗಳೇ ಹೇಳಿದ್ದ: “ನೀನು ಬೇರೆ ಕಡೆಗೆ ಹೋಗೋದು ವಾಸಿ”
ಎಂತ.

****

ಕೆಳಗೆ ಮೂರನೆಯ ಬೀದಿಯಲ್ಲಿ ಒಂದು ಹಳೆಯ ಕಟ್ಟಡವಿತ್ತು.
ಯಾಕೋ ಅದರ ಬಾಗಿಲು ತೆರೆಯುತ್ತಿರಲಿಲ್ಲ. ಆ ಜಗಲಿಗೆ ತನ್ನ ಬಿಡಾರ
ಸಾಗಿಸಿ ಬಿಡಬೇಕು ಎಂದು ಕಣ್ಣನ್ ಯೋಚಿಸುತ್ತಿದ್ದ. ಮುಂದೆ ಪೋಲೀಸರು
ಬಂದು ಕಾಡಿಸಿದರೆ, ಮಗಳನ್ನು ಮಂಡಿ ಸಾಹುಕಾರರ ಮನೆಯಲ್ಲೇ ಬಿಟ್ಟು
ಬಿಡುವುದು, ತಾನು ಸೌದೆ ಡಿಪೋವನ್ನು ಆಶ್ರಯಿಸುವುದು ಎಂದು ತಿರು
ಕಣ್ಣನ್ ತೀರ್ಮಾನಕ್ಕೆ ಬಂದ.

ಆ ಸಂಜೆ ಸ್ವಲ್ಪ ಮಟ್ಟಿಗೆ 'ಡಂಗಾಗಿ'ಯೇ ಅವನು ಗುಡಿಸಲಿಗೆ
ಮರಳಿದ್ದ.

ಅಲ್ಲಿ ಅವನ ಹಟ್ಟಿಯ ಎದುರು ಹತ್ತಾರು ಜನ ಗುಂಪು ಕೂಡಿ ಮಾತ
ನಾಡುತ್ತಿದ್ದರು. ನಡುವೆ ಅವರ ಸಂಘದ ಅಧ್ಯಕ್ಷ ರಂಗೇಶಿ,

ಒಬ್ಬ ಯುವಕ ಕೆಲಸಗಾರ ಕೂಗಾಡುತ್ತಿದ್ದ....

“ಎಲ್ಲಾ ಬುಟ್ಟುಡಣ್ಣ ರಂಗೇಶಿ, ನಿನ್ತಾವ ಎಲ್ಲೈತೆ ದುಡ್ಡು ? ಫ್ಯಾಕ್ಟರಿ
ಯವರು ಅತ್ಸಾವಿರ ಕೊಡ್ತಾರೇಂತ ನೀನೂ ಚುನಾವಣೆಗೆ ನಿಂತುಕೊಂಡಿದ್ಯ...
ನಂಗೊತ್ತಿಲ್ವಾ! ಹಹ್ಹ!”

ರಂಗೇಶಿ ಶಾಂತನಾಗಿ ಉದ್ದುದ್ದ ಭಾಷಣ ಕೊಡಲು ಶುರುಮಾಡಿದ.
ಆದರೆ ನೆರೆದಿದ್ದವರಲ್ಲಿ ಬಹಳ ಜನ ಹೊರಟುಹೋದರು; ಕೂತಿದ್ದವರು
ಕೆಲವರು ಮಾತ್ರ. ಏಳುವುದೂ ಒಂದು ಆಯಾಸದ ಕೆಲಸವೇ ಎಂದು,
ಕುಳಿತೇ ಇದ್ದರು.