ಕೊನೆಗೆ ರಂಗೇಶಿ ತಿರುಕಣ್ಣನ ಬಳಿಗೆ ಬಂದ.
ಅದೇ ರಂಗೇಶಿ! ಆ ದಿನ ಡಿಸ್ಮಿಸ್ ಆದಾಗ ಅವನ ಬಳಿ ಹೋಗಿ
ಕಾಲು ಹಿಡಿದು ಗೋಗರೆದು ತಿರುಕಣ್ಣ ಅತ್ತಿದ್ದ. ಆಗ, “ನೀನು ಸಂಘದ
ಮೆಂಬರಲ್ವಲ್ಲಾ” ಎಂದು ಉತ್ತರ ಬಂದಿತ್ತು. ಅವನನ್ನು ಸಿಗಿದು ಹಾಕ
ಬೇಕು, ಎನ್ನುವಷ್ಟು ಸಿಟ್ಟು ಬಂತು ತಿರುಕಣ್ಣನಿಗೆ.
“ಅಂತೂ ನೀನೂ ನಿಂತ್ಬಿಟ್ಟೆ ಚುನಾವಣೆಗೆ!” ಎಂದ ತಿರುಕಣ್ಣ ವ್ಯಂಗ್ಯ
ವಾಗಿ.
ಅದೇ ಧ್ವನಿಯಲ್ಲಿ ಮತ್ತೂ ಹೇಳಿದ.
“ಆರೋಗ್ಯ ಒಂಟೋದ್ಲು. ಇಲ್ದಿದ್ರೆ ಎಲ್ಡು ಓಟು ಬರ್‌ತಿತ್ತು
ನಿಂಗೆ!”
“ಇಲ್ಲ ತಿರುಕಣ್ಣ, ನೀನು ಒಳ್ಳೆಯವನು. ಮಾಲಿಕರಿಗೆ ಹೇಳಿ ಕೆಲಸ
ಕೊಡಿಸ್ತೀನಿ. ಒಂದೇ ಶರ್ತ. ಈ ಕೇರಿಯ ಎಲ್ಲಾ ಓಟನ್ನೂ ನೀನು ನಂಗೇ
ಕೊಡಿಸ್ಬೇಕು” ಎಂದು ರಂಗೇಶಿ ವಯ್ಯಾರವಾಗಿ ಹೇಳಿದ.
ತಿರುಕಣ್ಣ ಗಟ್ಟಿಯಾಗಿ ಕರ್ಕಶವಾಗಿ ಉತ್ತರಕೊಟ್ಟ:
“ಓಗೋಗು...... ಮುಚ್ಕೊಂಡು ಹೋಗು........ ನಿನ್ನ ಬಂಡ್ವಾಳ್ವೆಲ್ಲ
ಬೀದಿಗೆಳ್ದೇನು........ಓಗ್!"
ಇದಾದ ಮರುದಿನವೇ ಗುಡಿಸಲಿನ ಮಾಲಿಕ ಬಂದು ಗುಡಿಸಲಿನಲ್ಲಿದ್ದ
ಕುಡಿಕೆ ಮಡಿಕೆಗಳನ್ನೆಲ್ಲ ಬೀದಿಗೆಳೆದು ತಿರುಕಣ್ಣನನ್ನು ಹೊರಹಾಕಿದ. ಬಲು
ಸಂಕಟವಾಯಿತು ತಿರುಕಣ್ಣನಿಗೆ. ಗುಡಿಸಲನ್ನು ಬಿಡಬೇಕೆಂದು ತಾನಾಗಿಯೇ
ಹಿಂದೆ ಯೋಚಿಸಿದ್ದಾಗ ಆ ನೋವು ತಿಳಿದಿರಲಿಲ್ಲ. ಈಗ ಬಿಡಲೇಬೇಕಾಗಿ
ಬಂದಾಗ ಅವನ ಕರುಳು ಕಿವುಚಿ ಬರುತ್ತಿತ್ತು. ಆ ಹಲವು ನೆನಪುಗಳು...
ಆರೋಗ್ಯಮ್ಮನ ಕೊನೆಯ ದಿನಗಳು.
ಆದರೂ ಅವನು ಬೇರೆ ಗತಿ ಇಲ್ಲದೆ ಆ ಜಗಲಿಗೆ ಹೊರಟು ಹೋದ.
****
ಚುನಾವಣೆಯ ಸಂಭ್ರಮ ನಡದೇ ಇತ್ತು.
ಆ ದಿನ ಮತ್ತೆ ಮೂರು ಪಕ್ಷಗಳ ಸ್ವಯಂ ಸೇವಕರು ಸೌದೆ ಅಂಗಡಿಗೆ
ಬಂದರು. ಕಣ್ಣು ತಪ್ಪಿಸಲು ಎಷ್ಟು ಯತ್ನಿಸಿದರೂ ಗಂಟೆಗಟ್ಟಲೆ ಕಾದು
ಅವರು ಅವನನ್ನು ಪೀಡಿಸಿದರು.
“ತಿರುಕಣ್ಣನ್ ತಿರುಕಣ್ಣನ್! ನಮಗೆ ಓಟು-ನಮಗೆ!”
ಆ ಸಾಯಂಕಾಲ ಇನ್ನೊಂದು ದೊಡ್ಡ ಕಾರು ಬಂತು. ಅದರ ಎದುರು