ಎರಡೆತ್ತುಗಳನ್ನು ಎತ್ತಿ ಕಟ್ಟಿದ್ದರು. ಭಾರಿ ದೇಹದ ವ್ಯಕ್ತಿಯೊಬ್ಬರು ಕೆಳಕ್ಕಿಳಿ
ದರು. ಅವರು “ಕೇರಿಯ ತಿರುಕಣ್ಣ ಇದ್ದಾರೆಯೆ?” ಎಂದು ಕೇಳಿದರು.
ಈ ಸಾರೆ ಗಡಸು ದನಿಯಲ್ಲೇ ತಿರುಕಣ್ಣ, “ಯಾಕ್ಸಾಮೀ?” ಎಂದ.
ಬಂದವರು ದೇಶಾವರಿ ನಗೆ ಬೀರಿದರು. ಅವರ ಜತೆಯಲ್ಲಿದ್ದವನೊಬ್ಬ
ಹೇಳಿದ:
“ರಾಯರ ಪರಿಚಯ ಇದೆ ಅಲ್ವೇನಪ್ಪಾ?”
ತಿರುಕಣ್ಣ ಅವರ ಖಾದಿಟೋಪಿಯತ್ತ ನೋಡುತ್ತ, “ಓಹೋ! ಇಲ್ಲೆ?”
ಎಂದ.
“ಯಾರು ಹೇಳು?” ಎಂದರು ಸ್ವತಹ ರಾಯರು.
“ಇನ್ಯಾರು ಬುದ್ಧಿ ? ಸರ್ಕಾರದೋರು.”
ಕ್ಷಣ ಕಾಲ ರಾಯರು ಸುಮ್ಮನಾದರು.
ಬಳಿಕ “ನಿಮಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನೋರು. ನೆಹ್ರೂ
ಹೇಳಿದ್ದಾರೆ... ನನಗೆ ಓಟು ಹಾಕಪ್ಪ_”
ನಗೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ಸಿನವರನ್ನು ಸ್ಮರಿಸಿ ತಿರುಕಣ್ಣ
ನಸುನಕ್ಕ.
... ಬೀದಿಗಳಲ್ಲಿ ಕೂಗಾಟ ಹೆಚ್ಚುತ್ತ ಹೋಯಿತು. 'ಪವಿತ್ರ ಹಕ್ಕನ್ನು
ಚಲಾಯಿಸಿ' 'ಘನವಾದ ಓಟನ್ನು ನೀಡಿ' 'ಮತದಾನ ಮಾಡಿ' 'ನಿಮ್ಮ ಮಕ್ಕಳ
ಹೆಸರಲ್ಲಿ, ವೀರ ಸಂತಾನದ ಹೆಸರಲ್ಲಿ, ನಿಮ್ಮ ಪವಿತ್ರ ಮತವನ್ನು ದಯ
ಪಾಲಿಸಿ...'
ಮೂರು ವಾರಗಳ ಹಿಂದೆ ಒಂದು ಬೆಳಗು ಮುಂಜಾನೆ ಸ್ವತಂತ್ರ
ಕಾರೊಂದು ತನ್ನ ಮನೆ ಬಾಗಿಲಿಗೆ ಬಂದಿದ್ದುದನ್ನು ತಿರುಕಣ್ಣ ಮರೆತುಬಿಟ್ಟಿದ್ದ.
ನೋಡಿ ನೋಡಿ ಬೇಜಾರವಾಗಿದ್ದ ದಿನನಿತ್ಯದ ನಾಟಕವಾಗಿತ್ತು, ಆ ಬೀದಿಯ
ನೋಟ.
"ಇನ್ನು ಆರೇ ದಿನ-ಐದೇ ದಿನ-ನಾಲ್ಕೇ ದಿನ- ಅಗೋ ಇನ್ನು ೪೮
ಗಂಟೆಗಳ ಒಳಗಾಗಿ!”
ಆ ದಿವಸ ಯಾರೂ ಸೌದೆ ಒಡೆಸಲೇ ಇಲ್ಲ. ಡಿಪೋದಲ್ಲೂ ಸೌದೆ
ಇರಲಿಲ್ಲ. ಮೂರು ಬಾರಿ ಸೇದಿ ಮುಗಿಸಿದ್ದ ಬೀಡಿಯನ್ನೇ ಮತ್ತೂ ಚೀಪುತ್ತ
ತಿರುಕಣ್ಣ ಒಂದೆಡೆ ಕುಳಿತ.
“ಇನ್ನು ಇಪ್ಪತ್ತನಾಲ್ವೇ ಗಂಟೆ... ಅದೋ ಆ ಸುಪ್ರಭಾತದಲ್ಲಿ....