ಪುಟ:KELAVU SANNA KATHEGALU.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

46

ನಿರಂಜನ: ಕೆಲವು ಸಣ್ಣ ಕಥೆಗಳು

ಧಾವಿಸುತ್ತಿದ್ದ ಸ್ವೇಚ್ಛಾವಿಹಾರಿ, ಕೋಳ ಕೈಯನ್ನು ಕಟ್ಟಿತ್ತೇ ಹೊರತು
ಹೃದಯವನ್ನು ಬಿಗಿದಿತ್ತೆ? ಮೆದುಳಿಗೆ ಬಂಧನ ಉಂಟೆ?

ರಣಗುಡುತ್ತಿದ್ದ ಬಿಸಿಲು. ಬೆವರುತ್ತ-ಒಣಗುತ್ತ, ಬೆವರುತ್ತ-ಒಣಗುತ್ತ,
ಮುದುಡಿದ್ದ ಮಾನವರು. ಓಡುತ್ತಿದ್ದ ಕರಿಯ ವಾಹನ ಎಬ್ಬಿಸುತ್ತಿದ್ದುದು
ಧೂಳಿನ ಮೋಡವನ್ನು. ಎರಡು ಬದಿಗಳಲ್ಲೂ ಬಿದಿರು ಮೇಳೆ. ಬೀದಿಯು
ದ್ದಕ್ಕೂ ಅವುಗಳ ಕಮಾನು. ಅಲ್ಲಲ್ಲಿ ಬಿದಿರ ರೆಂಬೆಗಳ ತುಂಟತನ ಬೇರೆ. ಇಳಿ
ಜಾರು ಹಾದಿಯಲ್ಲಿ ಮೋಟಾರು ಸಾಗುತ್ತಿದ್ದರೆ, ಸರ್‍ರನೆ ಕೆಳಕ್ಕೆ ಸರಿದು ವಾಹ
ನದ ಮೈ ಮುಟ್ಟಿ ಮತ್ತೆ ಚಂಗನೆ ಮೇಲಕ್ಕೇರುವ ಚಪಲ. ಬಿದಿರುಗಳಾಚೆ
ಬರಿಯ ಗುಡ್ಡ. ಗುಡ್ಡಗಳನ್ನು ದಾಟಿ ಮರಗಳು, ದಟ್ಟನೆಯ ಕಾಡು. ಆಕಾಶ
ವನ್ನು ಮೋಡ ದಟ್ಟಿಸಿತೇನೋ ಎನ್ನುವ ಹಾಗೆ ಒಮ್ಮೆಲೆ ಕವಿಯುತ್ತಿದ್ದ
ಕಾಡಿನ ಕತ್ತಲು. ಮರುಕ್ಷಣದಲ್ಲೇ,ಯಮಗಾತ್ರದ ಕೊಂಬೆಗಳ ಮೇಲೆ ಕುಳಿತು
ನಗುವ ಸೂರ್ಯ. ಅಲ್ಲಲ್ಲಿ ಸುಟ್ಟು ಬೂದಿಯಾದ, ಅರೆಸುಟ್ಟು ಕರಿಯಾದ
ಮರ ಗಿಡಗಳು, ಉರಿಯುತ್ತ, ಹೊಗೆಯಾಡುತ್ತ ಉಳಿದ ಮರದ ಕೊರಡು.
ವನದೇವ ಅಲ್ಲಿ ಅಡುಗೆ ಬೇಯಿಸಿ ಉಂಡಿದ್ದನೆಂಬುದಕ್ಕೆ ಅದು ಕುರುಹು,
ಮತ್ತೆ ಅಲ್ಲಲ್ಲಿ ಜುಳು ಜುಳು ಹರಿಯುವ ತಿರುತೊರೆ-ಉಪನದಿ; ಚಲಿಸದೆ ನಿಂತ
ಕಪ್ಪು ನೀರಿನ ಕೆರೆ. ಕ್ಷಣವೂ ನಿಲ್ಲದೇ ಹೊರಟೇ ಹೋಗುವ ಜನರನ್ನು ಕಂಡು
ಅಣಕಿಸುತ್ತಿದ್ದ ಕೋತಿಗಳು; ಕರಿ ಮುಸುಡಿನ ಕೆಂಪು ಮುಸುಡಿನ 'ಮಂಗ್ಯಾ.'
ಆಗೊಮ್ಮೆ ಈಗೊಮ್ಮೆ ಹೆಬ್ಬಾವು ಬೀದಿ ದಾಟಿತ್ತೆಂಬುದಕ್ಕೆ ಸಾಕ್ಷ್ಯವಾಗಿ ಉಳಿ
ದಿದ್ದ ಗುರುತು, ಹಾದಿಯ ಇಳಕಲು ನೇರವಾದುದಲ್ಲ; ಸುರುಳಿಯಾದ ಹಾವಿನ
ಹಾಗೆ. ತಿರುತಿರುಗಿ ಹೊರಟಲ್ಲಿಗೇ ಬರುತ್ತಿರುವವೇನೋ ಎಂಬ ಭ್ರಮೆ ಹುಟ್ಟಿ
ಸುವಂತೆ. ಎದುರಿನಿಂದ ಮೋಟಾರು ಬಂದಾಗಲಂತೂ ಧೂಳಿನ ಬೆಟ್ಟ ಕರಗಿ
ನೆಲಕ್ಕಿಳಿಯುವ ತನಕ ಒಂದು ಹೆಜ್ಜೆ ದೂರವೂ ಕಾಣಿಸದಂತಹ ಪರಿಸ್ಥಿತಿ.
ರೊಯೋ ಎನ್ನುವ ಬಸ್ಸಿನ ಗೀತಕ್ಕೆ ಮಾರುಹೋಗಿ ಕುಳಿತವರಿಗೆ ತೂಕಡಿಕೆ-
ಮಂಪರು-ನಿದ್ದೆ. ಪೋಲೀಸ್ ಅಧಿಕಾರಿಯ ಭುಜಕ್ಕೆ ತಲೆಯೊರಗಿಸುವ ಕೈದಿ.
ಕೈದಿಯನ್ನು ಮರೆತು ನಿದ್ದೆ ಹೋಗುವ ಅಧಿಕಾರಿ... ಈ ಬೇಗೆಯಲ್ಲಿ ಆಗಾಗ್ಗೆ
ಸಣ್ಣನೆ ಕದ್ದು ಬೀಸಿ ಕಚಗುಳಿ ಇಟ್ಟು ಕಣ್ಮರೆಯಾಗುತ್ತಿದ್ದ ತಂಗಾಳಿ.

ನಾವು ಅಂಕೋಲ ತಲುಪಿದಾಗ ಕತ್ತಲಾಗಿತ್ತು. ಅಲ್ಲಿಂದ ಕಡಲಿನುದ್ದಕ್ಕೂ
ಒಂದು ಗಂಟೆಯ ಹಾದಿ ಕಾರವಾರಕ್ಕೆ. ನಮ್ಮ ವಾಹನ-ಅಂದರೆ ಸರಕಾರಕ್ಕೆ
ಸೇರಿದ ಪೋಲೀಸರ ವಾಹನ-ಬೆಳಕಿನ ಎರಡು ಕಣ್ಣುಗಳಿಂದ ಹಾದಿ ನೋಡುತ್ತ
ಸಾಗಿತು.ಹುಣ್ಣಿಮೆಯನ್ನು ಸಮೀಪಿಸುತ್ತಿದ್ದ ಚಂದಿರ ಆಗಲೇ ಹಾಲು ಚೆಲ್ಲಿದ್ದ.