ಪುಟ:KELAVU SANNA KATHEGALU.pdf/೭೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
48
ನಿರಂಜನ: ಕೆಲವು ಸಣ್ಣ ಕಥೆಗಳು
 

ಕೊಟ್ಟ. ಮೂಲೆಯಲ್ಲಿ ಕರಿದಾದೊಂದು ಪೀಪಾಯಿ ಇತ್ತು. ಮೀನಿನ, ಹೆಂಡದ
ವಾಸನೆ. ನನಗೆ ಉಸಿರುಕಟ್ಟಿತು.

“ಒಳಗ್ಹೋಗಿ!”

ಅಧಿಕಾರಿ ಬಹುವಚನದಿಂದ ಸಂಬೋಧಿಸಿದ್ದನೆಂದು, ಈತನೂ ಅಷ್ಟರ
ಮಟ್ಟಿನ ಗೌರವವನ್ನಿತ್ತ.

ಕಿರ್‍ರೆಂದು ಬಾಗಿಲು ಮುಚ್ಚಿತು. ಕೊಟಕ್ ಎಂದಿತು ಬಿಗಿದುಕೊಂಡ
ಬೀಗ. ದೀಪ ಮರೆಯಾಯಿತು. ಲಾಕಪ್ಪಿನೆದುರು ಮರದ ಪೀಠದ ಮೇಲೆ
ಬಂದೂಕುಧಾರಿಯಾದ ಪೋಲೀಸರವನು ಕಾವಲು ಕುಳಿತ. ಅಪಾಯಕಾರಿ
ಯಾದ ಕೈದಿಯನ್ನು ಅಷ್ಟು ದೂರದಿಂದ ತಂದಿದ್ದ ಇತರ ಪೋಲೀಸರು, ತಮ್ಮ
ಕೆಲಸ ಮುಗಿಯಿತೆಂದು ಲೈನುಗಳಿಗೆ ಹೊರಟರು.

ನನ್ನ ಚೀಲದಲ್ಲಿದ್ದುದು, ಹೊದ್ದುಕೊಳ್ಳಲೆಂದು ತಂದಿದ್ದ ಚಾದರ,
ಓದಲು ಪುಸ್ತಕಗಳು. ಆ ಚೀಲವನ್ನು ಕೈಲಿ ಹಿಡಿದೇ ಒಂದು ಕ್ಷಣ ದಿಗ್ಮೂಢ
ನಾಗಿ ಅಲ್ಲೇ ನಿಂತೆ. ಕತ್ತಲಲ್ಲೂ ಕಾಣಲು ಕಣ್ಣುಗಳು ಯತ್ನಿಸಿದುವು. ಕೂಡು
ದೊಡ್ಡಿಯಲ್ಲಿ ಮಲಗಿಕೊಂಡಿದ್ದ ಮಾನವ ಪ್ರಾಣಿಗಳು. ಬಗೆಬಗೆಯ ಗೊರಕೆಯ
ಸ್ವರಗಳು... ಯಾವುದೋ ಮೂಲೆಯಿಂದ ಮೂತ್ರದ ವಾಸನೆ ಬರುತ್ತಿತ್ತು....
ಗೋಡೆಯನ್ನು ಸಮೀಪಿಸಿ ಚಾದರವನ್ನು ಹಾಸಿದೆ. ಪುಸ್ತಕಗಳ ಚೀಲ ತಲೆ
ದಿಂಬಾಯಿತು. ಸೊಳ್ಳೆಗಳೆಲ್ಲ ಹೊಸಬನಾದ ನನ್ನ ಬಳಿಗೇ ನಾಲ್ಕೂ ಕಡೆಗಳಿಂದ
ಧಾವಿಸಿ ಬಂದು ನನ್ನ ಸುಖ ದುಃಖ ವಿಚಾರಿಸಿದುವು. ಲಜ್ಜೆಗೊಂಡು ನಾನು
ಅಂಗೈಗಳಿಂದ ಮುಖ ಮುಚ್ಚುವ ಹಾಗಾಯಿತು....

ತೆರೆಗಳ ಸದ್ದು ಕೇಳಿಸುತ್ತಿತ್ತು ಈಗಲೂ; ಸ್ಟೇಷನ್ನಿನ ಆವರಣದ
ಹೊರಗಿದ್ದ ಯಾವುದೋ ಮರದ ಮಾತಿನಮಲ್ಲಿ ಎಲೆಗಳ ಕಿಚಕಿಚ ರವ,
ದೂರದ ಬೀದಿಯಲ್ಲಿ ಗಡಗಡನೆ ಹಾದು ಹೋದ ಮುರುಕಲು ಮೋಟಾರು...
ಯೋಚನೆ ಅತ್ತಿತ್ತ ಸುತ್ತಾಡಿ ಆಯಾಸಗೊಂಡು ದೇಹದ ಚಾವಣಿಯೊಳಕ್ಕೆ
ಮರಳಿ ನುಸುಳಿತು.

ಮನುಷ್ಯ ಅಂತರ್ಮುಖಿಯಾಗುವುದು ಇಂತಹ ಘಳಿಗೆಯಲ್ಲೆ!

ನಿದ್ದೆ, ಬಹಳ ಹೊತ್ತು ಕಾಡಿಸಿದ ಬಳಿಕ ಶರಣು ಬಂತು.

ರಾತ್ರಿ ಕಳೆದು ಬೆಳಕು ಬೀದಿಯಿಂದ ತೂರಿ ಬರುತ್ತಿದ್ದ ಸೂರ್ಯ ಕಿರಣ
ಗಳು. ಒಬ್ಬೊಬ್ಬರಾಗಿ ನಿದ್ದೆ ಕಳೆದು ಏಳುತ್ತಿದ್ದ ಆ ಜನ... ಕೊಂಕಣಿ ಮಾತು-
ಕನ್ನಡ. ಕೊಳೆಯಾಗಿದ್ದ ಬಟ್ಟೆಬರೆ. ನನ್ನನ್ನು ಕುರಿತು ಕುತೂಹಲದ ದೃಷ್ಟಿ,
ಅಲ್ಲಿ ಪ್ರಾತರ್ವಿಧಿಯ ಪ್ರಶ್ನೆಯಿಲ್ಲ. ಮುಖ ತೊಳೆಯಲು ನೀರಿಲ್ಲ. ನೆಲವನ್ನು