ಮುಟ್ಟಿಸುತ್ತಿದ್ದ ಖಾರಬಿಸಿಲು. ಬೇಸಗೆಯೇನೊ ಮುಗಿಯುತ್ತ ಬಂದಿತ್ತು. ಆದರೆ, ಮೋಡಗಳ ಸುಳಿವಿರಲಿಲ್ಲ. ಹಾದಿ ನಡೆಯುತ್ತಿದ್ದ ಹಿರಿಯನನ್ನು, ಎಂದಿನ ಸಂಕಟವೇ ಇಂದೂ ಬಾಧಿಸಿತು. ಮತ್ತೂ ಹತ್ತಾರು ದಿನ ಮಳೆ ಬರದೇ ಹೋದರೆ? ಈ ಸಲದ ಬಿತ್ತನೆಯ ಗತಿ? ವರ್ಷಕ್ಕೊಂದೇ ಆದ ಪೈರಿನ ಗತಿ...? ಗುಡ್ಡದ ಮರೆಯಲ್ಲಿ ಕ್ಷಾಮರಾಕ್ಷಸ ಹೊಂಚು ಹಾಕುತ್ತ ಅಡಗಿ ಕುಳಿತಿದ್ದ. ತಾಯ್ನೆಲ ಭಣಗುಡುತ್ತಿತ್ತು. ಪೊರೆಕಳಚಿದ ಹಾವು, ಪ್ರಕೃತಿ, ಉದ್ದಕ್ಕೂ ಒರಗಿತ್ತು ಆ ಬಿಳಿಯ ಪೊರೆ. ಪುಡಿ ಪುಡಿಯಾಗಿದ್ದ ಕಣಕಣವಾಗಿದ್ದ ಕಾಲುಹಾದಿ, ದಾರಿ ತುಳಿಯುತ್ತ ಆ ಬಿಳಿಯ ಗೆರೆಯನ್ನು ಹಿರಿಯ ನೋಡಿದ ದೃಷ್ಟಿಯೊಡನೆ ನಡುಬಾಗಿತು. ಹೃದಯದ ಭಾರದಿಂದ ತಪ್ಪಿಸಿಕೊಂಡ ಬಿಸಿಯುಸಿರು ದೀರ್ಘವಾಗಿ ಹೊರಬಂತು.
ಹಿರಿಯನ ಸಂಕಟವನ್ನು ಗ್ರಹಿಸಿದ ರಾಮ, ಕನಸಿನ ಲೋಕದಿಂದ ಕೆಳಕ್ಕಿಳಿದು ಬಂದ. ಎಂದಿಗಿಂತ ಭಿನ್ನವಾದ ಆ ದಿನದಲ್ಲೂ ಆ ಹೊತ್ತಿನಲ್ಲೂ ಹಾಗಿರಬೇಕೆ ತನ್ನ ತಂದೆ?
“ಏನಪ್ಪಾ ಅದು?”
"ಈ ದುರ್ಗತಿ ನಮಗೆ ಬಂತಲ್ಲಾ ಅಂತ ಯೋಚಿಸ್ತಿದ್ದೆ, ಮಗಾ."
“ಸಾಕು, ಸಾಕು! ನಿನ್ನದು ಯಾವಾಗಲೂ ಒಂದೇ ಹಾಡು!"
ಬಿಸಿಲಿನಷ್ಟೇ ಬಿಸಿಯಾಗಿದ್ದ ಉಗುಳನ್ನು ಹಿರಿಯ ನುಂಗಿದ. 'ಉಚ್ಮುಂಡೆ!' ಎಂದುಕೊಂಡ ಮನಸಿನಲ್ಲೆ. 'ಒಂದೇ ಹಾಡು'... ಹೂಂ... ಹೀಗಾಗಬಹೂದೂಂತ ಯಾರಿಗೆ ಗೊತ್ತಿತ್ತು? ತನ್ನ ಹಿರಿಯ ಮಗನಿಗೇ ಈ ರೀತಿ ಹುಚ್ಚು ಹಿಡಿಯುವುದೆಂದರೆ?ಸಾಲದುದಕ್ಕೆ, ಶಹರದಲ್ಲಿ ಓದುತ್ತಿದ್ದ ಎರಡನೆಯ ಮಗ ಕೃಷ್ಣ ಕೂಡಾ....
"ಕಲಿಗಾಲ..."
೨
ಕೆಟ್ಟ ಸುದ್ದಿಯನ್ನು ಕೇಳಿದ ಆ ದಿನ, ತನ್ನ ಓರಗೆಯವರಷ್ಟೋ ಜನ ನಕ್ಕಿದ್ದರು.
___'ಆದರೆ ಹೋದರೆ, ಅಜ್ಜಿಗೆ ಮೀಸೆ ಬಂದರೆ...!'
___'ಐ-ಬಿಡಿ!'