ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

58
ನಿರಂಜನ: ಕೆಲವು ಸಣ್ಣ ಕಥೆಗಳು

ಗಾಳಿಯಲ್ಲಿ ಸುದ್ದಿ, ತೇಲಿ ಬಂದಿತ್ತು-ತೇಲಿ ಹೋಗಿತ್ತು.

ಸ್ವಲ್ಪ ಸಮಯದ ಅನಂತರ, ಅದನ್ನೆಲ್ಲರೂ ಮರೆತಿದ್ದ ಹೊತ್ತಿಗೆ, ಹೊಸ ಜನ ಅಲ್ಲಿಗೆ ಬಂದರು -ಹ್ಯಾಟು ಬೂಟು ತೊಟ್ಟ ಅಪರಿಚಿತರು. ಅವರ ಹಿಂದೂ ಮುಂದೂ ಓಡಾಡಿದರು ಗ್ರಾಮಾಧಿಕಾರಿಗಳು.

-'ಹಳ್ಳಿಯನ್ನು ಬಿಟ್ಟು ಹೋಗ್ಬೇಕು.'
-('ಅಹಾ! ಎಲ್ಲಿಗೆ? ಯಾರಪ್ಪನ ಮನೆಗೆ?')
-'ಏ ಗೌಡ! ನೀನೊಬ್ಬನೇ ಅಲ್ಲ ಕಣಯ್ಯ!'
-'ರೀ, ಗೌರವ ಕೊಟ್ಟು ಮಾತನಾಡಿ.'
-'೦h! I see !'
-'ಒಟ್ಟು ಹನ್ನೆರಡು ಹಳ್ಳಿ ಖಾಲಿಯಾಗ್ತವೆ.'
-'ಅನ್ನೆರಡು ಅಳ್ಳಿ?'

-'ಹೂಂ. ದೇಸಾಯರು, ಜೋಡೀದಾರ್‍ರು, ಇನಾಂದಾರ್‍ರು-ಎಲ್ರೂ ಒಪ್ಕೊಂಡಿದಾರೆ. ಸಣ್ಣ ಪುಟ್ಟ ಆಸ್ತಿ ಪಾಸ್ತಿ ಇರೋ ನಿಮ್ಮದೇನಪ್ಪ ಇನ್ನು?'

ಮಹಾ ಬುದ್ದಿವಂತರೇ ಸರಿ. ಚತುರೋಪಾಯಗಳೂ ಗೊತ್ತಿದ್ದುವು ಅವರಿಗೆ. ಪರಿಹಾರ-ಹಣ. 'ಬೇರೆ ಕಡೆ ಭೂಮಿ ಕೊಂಡ್ಕೋಬಹುದು.' ಅಥವಾ ಹೊಲಕ್ಕೆ ಬದಲು ಹೊಲ (ಬಂಜರು ಭೂಮಿಗೇನು ಬರಗಾಲ?) ಸಾವಿರಾರು ಜನರಿಗೆ ಕೆಲಸ ಬೇರೆ.

"ಕೆಲಸ? ಎಂಥ ಕೆಲಸ?"
“ಕೂಲಿ ಕೆಲಸ."
“ಕೂಲಿ? ನಾವು ರೈತರು. ಕೂಲಿ-ನಾಲಿ ಮಾಡೋವರಲ್ಲ!"
"ಈ ರೈತರಿಗೆ ಒಂದೂ ಅರ್ಥವಾಗೋದಿಲ್ಲ"
"ಹುಂ!"
"ಈ ಹಳ್ಳಿಗಳೆಲ್ಲ ನೀರಿನ ಕೆಳಗೆ ಮುಳುಗುತ್ತೆ ಗೌಡರೆ!"
"ನೀರಿನ ಕೆಳಗೆ? ಮುಣುಗುತ್ವೆ?”
“ಹೌದು. ಸಾವಿರ ಎಕರೆ ಮುಳುಗಿದರೇನ್ರ,? ಲಕ್ಷ ಎಕರೆ ಭೂಮಿಗೆ ನೀರು ಸಿಗುತ್ತೆ. ಅಷ್ಟೇ ಅಲ್ಲ-”
“ಸಾಕು! ಸಾಕು!"

ಸಿಡಿಮಿಡಿಗೊಂಡು ತಾನು ದಡದಡನೆ ಅಲ್ಲಿಂದ ಹೊರಟು ಬಿಟ್ಟಿದ್ದ. ರಾಮ ಮಾತ್ರ ಆ ಜನರ ಜತೆಯಲ್ಲಿ, ಮಾತುಗಳಿಗೆ ಕಿವಿಗೊಡುತ್ತ, ನಿಂತಿದ್ದ. ಹುಚ್ಮುಂಡೆ! ಕತ್ತಲಾಗುವ ಹೊತ್ತಿಗೆ ಮನೆಗೆ ಬಂದ.