ಪುಟ:KELAVU SANNA KATHEGALU.pdf/೮೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
ಒಂಟಿ ನಕ್ಷತ್ರ ನಕ್ಕಿತು
59
 

"ಅಲ್ಲೇನೊ ಮಾಡ್ತಿದ್ದೆ ಇಷ್ಟೊತ್ತು?”

“ಇಕಾ, ಕಾಜಗ ಕೊಟ್ಟವ್ರೆ. ಇದರೊಳಗೆಲ್ಲಾ ಪಿರಿಂಟ್‌ ಮಾಡೈತೆ."

“ಫಿರಿಂಟ್‌ ಮಾಡೈತೆ- ಮಣ್ಣು!”

****

ಮುಂದಿ ಆಗಬೇಕಾಗಿದ್ದುದು ಆಗಿಯೇ ಹೋಯಿತು. ರಾಮ ಪಲ್ಲವಿ ನುಡಿದ:

“ನಡಿ, ಓಗಾನ. ಎಲ್ಲಾರಿಗಾಗೋದು ನಮಗೂ ಆಗ್ತೇತೆ."

ಹೊಲವನ್ನು ಮಾರಲಿಲ್ಲ ನಾನು. ಬದಲಿ ಭೂಮಿಯನ್ನು ಕೊಟ್ಟಿರು. ಮೂರೆಕರೆಗೆ ಮೂರೆಕರೆ. ನದಿಯ ದಂಡೆಯಲ್ಲಲ್ಲ. ಕೆಳಕ್ಕೆ, ಒಳಕ್ಕೆ.

ಹುಟ್ಟಿ ಬೆಳೆದ ಹಳ್ಳಿಯ ಹನುಮಂತರಾಯನ ಗುಡಿಯ ಮುಂದೆ ನಿಂತು ನಾನೆಂದೆ:

“ಓಗ್ಬರ್‍ತೀನಪ್ಪ. ಅಳ್ಳಿ ಮುಣಿಗಿಸ್ಬೌದು, ನಿನ್ನನ್ನು ಮುಣಿಗಿಸೋಕಾತದಾ? ಮನಿಸ್ಯರು ತಿಳೀದೆ ತಪ್ಮಾಡ್ತಾ ಅವರೆ. ಕ್ಸಮ್ಸಪ್ಪಾ..."

ವಲಸೆ ಬಂದವರನ್ನು ಅಣಕಿಸಿತು ಬರಿದಾಗಿದ್ದ ಹೊಸ ಮಣ್ಣು. ಆ ನೆಲಕ್ಕೆ ಕೈ ಬಡೆದು, ಅಂಥ ಸ್ಥಿತಿಗೆ ನಮ್ಮನ್ನು ತಂದವರಿಗೆ ನಾನು ಶಾಪವಿತ್ತೆ; ಹಣೆ ಚಚ್ಚಿಕೊಂಡು ಮನದಣಿಯೆ ಅತ್ತೆ.

.... ಆ ದಿವಸದಿಂದ ಇವತ್ತಿನವರೆಗೆ- ಈ ಮೂರು ವರ್ಷಗಳ ಕಾಲ-ಏನನ್ನೆಲ್ಲ ಕಂಡೆ ನಾನು!

ಮೊದಮೊದಲು, ಎಲ್ಲೋ ಕೇಳಿದ ಯಾವುದೋ ಸುದ್ದಿ ಎನ್ನುವ ಹಾಗೆ-ಬಳಿಕ ಉತ್ಸಾಹದಿಂದ, ನನ್ನ್ನ ಮಗ ರಾಮನೇ ಬಂದು ಹೇಳುತ್ತಿದ್ದ.

“ಎಲ್ರೂ ಬಂದ್ಬಿಟ್ಫವ್ರೆ. ನದೀಲಿ ತಳ ಎಷ್ಟು ಆಳಕ್ಕೈತೆ ಅಂತ ಭೈರಿಗೆ ಕೊರೆದು ನೋಡ್ತವ್ರೆ. ದೊಡ್ದೊಡ್ಡ ಲಾರಿಗ್ಳು ಬಂದವೆ-ಅತ್ತಿಪ್ಪತ್ತು. ಮಿಸ್ನುಗಳೂ ಯಂತ್ರಗಳೂ ಬಂದ್ಬಿಟ್ಟಿವೆ. ಅದೇನೋ ಕ್ರೇನೂಂತ ತಗೊಂಡ್ಬಂದವ್ರೆ ಅಪ್ಪಾ. ತೆಂಗಿನಮರದಂತೆ ಎತ್ತರಕ್ಕೈತೆ. ಎಂಗ್ಬೇಕಾದರೂ ತಿರುಗ್ತೇತೆ. ಕೈಯಿಂದ ಕಡ್ಡೀನ ಇಂಗೆತ್ತಿ ಅಂಗ್ಮಡ್ಗಾಕಿಲ್ವ ನಾವು?-ಅಂಗೇನೆ, ಎಸ್ಟ್‌ ಬಾರದ್ಸಾಮಾನಿದ್ರೂ ಒಂದ್ಕಡೆಯಿಂದ ಇನ್ನೊಂದ್ಕಡೆಗಿಡ್ತೇತೆ."

ನಮ್ಮ ನದಿ. ಬೇಸಗೆಯಲ್ಲಿ ಕಿರುಬೆರಳಿನೆಷ್ಟು ನೀರು. ಮಳೆ ಬಂದಾಗ ಕೆರಳಿದ ಮಹಾ ಕಾಳಿ. ಏನಾದರೇನು? ಮನುಷ್ಠ ಮಾಡುವ ತಪ್ಪಿಗೆ ಅದು ದೇವರು ಕೊಡುವ ಶಿಕ್ಷೆ. ಅಂಥ ದೇವರ ಶಕ್ತಿಯೊಡನೆ ಈ ಜನರ ಸೆಣಸಾಟ. ನಾಸ್ತಿಕರು! ಹುಂ!