ಪುಟ:KELAVU SANNA KATHEGALU.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

62

ನಿರಂಜನ: ಕೆಲವು ಸಣ್ಣ ಕಥೆಗಳು

“ನಾನ್ಯಾಕೊ ಬರ್ಲಿ?”
“ಇಲ್ಲ ಅಪ್ಪ, ನೀನು ನಿನ್ನ ಕಣ್ಣಿಂದ್ಲೇ ನೋಡ್ಬೇಕು.”
ಅದಕ್ಕೆ ಆತ ತನ್ನಾಕೆಗೆ ಹೇಳಿದ್ದ.
“ಅದೇನೈತೋ ನೋಡ್ಬರ್ತೀನಿ.”

ಅವರನ್ನು ಹಾದು ಮುಂದೆ ಹೋದವರು ಓಡುತ್ತ ಹೋದವರು-ಹಲ ವರು.ಹುಡುಗರಿಗೆ ಯುವಕರಿಗೆ ಮುದುಕರಿಗೆ-ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ. ತಗ್ಗಿನಿಂದ ಮೇಲಕ್ಕೆ ನಡೆದು ಬಂದಂತೆ ಅವರ ಕಣ್ಣಿಗೆ ಬಿತ್ತು-ಸಹಸ್ರ ಜನರನ್ನು ಹೊತ್ತು ಎತ್ತರದಲ್ಲಿ ಭವ್ಯವಾಗಿ ನಿಂತಿದ್ದ ಅಣೆಕಟ್ಟು ಮೇಲೂ ಜನರು, ಕೆಳಗೂ ಜನರು. ಒಂದೇ ಕಡೆ ನೆರೆದಿತ್ತು, ಹತ್ತೂರುಗಳ ಜಾತ್ರೆ. ನೀರಿನ ಅಲೆಗಳು, ಮಾತಿನ ಹಾಡಿನ ಅಲೆಗಳು, ಹರ್ಷೋದ್ಗಾರ, ಜಯಜಯಕಾರ. ನಗೆ-ಎಲ್ಲ ಜನರಿಂದಲೂ ಹೊರಟು, ವಿರಾಟ್‍ರೂಪ ತಳೆದು, ಗಿರಿಕಂದರ ಕಾನನಗಳನ್ನು ಕುಲುಕಿ ಅಲುಗಿಸಿ ನಗಿಸುತ್ತಿದ್ದ ನಗೆ. ತಳಿರುತೋರಣಗಳು, ಬಣ್ಣದ ಕಾಗದ ಗಳು. ನದಿಯ ಕತ್ತಿಗೆ ನೂರು ಹಾರಗಳಾಗಿದ್ದವು, ಸೂರ್ಯನ ಕೊನೆಯ ರಶ್ಮಿಗೆ ಮಿನುಗುತ್ತಿದ್ದ ಗಾಜಿನ ದೀಪಗಳು.

ಮೇಲೆ ಹೋಗಲು ಹಾದಿಯಿರಲಿಲ್ಲ. ಜಾಗವಿರಲಿಲ್ಲ.
“ತಡವಾಗಿ ಬಂದ್ವಿ,” ಎಂದು ರಾಮ ಗೊಣಗಿದ.
“ಏನು ಕೊಳ್ಳೆ ಹೋದದ್ದು? ಇಲ್ಲೇ ಇರಾನ,” ಎಂದ ಹಿರಿಯ.
ಜಲಾಶಯದೊಳಕ್ಕೆ ಸೂರ್ಯ ಧುಮುಕಿರಬೇಕು. ಒಮ್ಮೆಲೆ ಕತ್ತಲಾಯಿತು. ಮತ್ತೆ ಒಮ್ಮೆಲೆ, ಗಾಜಿನ ಬುರುಡೆಗಳೆಲ್ಲ

ದೀಪದ ಉಂಡೆಗಳಾದುವು. ನದಿಯ ಕೊರಳಹಾರಗಳ ಹಲವು ಸಹಸ್ರ ಮಣಿಗಳು ವರ್ಣರಂಜಿತವಾಗಿ ಬೆಳಗಿದುವು.

ಆಗ ಇದ್ದಕ್ಕಿದ್ದಂತೆ, ರುದ್ರ ಕಡಲು ಭೋರ್ಗರೆಯುತ್ತ ಏರಿ ಬಂದಂತಹ ಸದ್ದಾಯಿತು.
ಹಿರಿಯನ ಅಂಗಾಂಗಗಳು ತಣ್ಣಗಾದುವು.
(ಶಿಕ್ಷೆ ವಿಧಿಸಲು ಆ ಘಳಿಗೆಯನ್ನೇ ಆರಿಸಿದ್ದನೆ ದೇವರು?)
“ಅಗೋ!” ಎಂದ ರಾಮ, ಉಳಿದೆಲ್ಲ ಸದ್ದನ್ನೂ ಮೀರಿಸುವ ಏರುದನಿ

ಯಲ್ಲಿ.