ವಿಷಯಕ್ಕೆ ಹೋಗು

ಪುಟ:KELAVU SANNA KATHEGALU.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂಟಿ ನಕ್ಷತ್ರ ನಕ್ಕಿತು
63


ಅಣೆಕಟ್ಟಿನೆರಡು ತೆರೆದ ದ್ವಾರಗಳಿಂದ, ಕೋಟಿ ಶ್ವೇತಾಶ್ವಗಳು ಕರ್ಣಭೇದಕವಾಗಿ ಕೆನೆಯುತ್ತ, ಬಾಯಿಗಳಿಂದ ನೊರೆಯುಗುಳುತ್ತ, ಮುನ್ನುಗ್ಗುತ್ತಿದ್ದುವು. ಕುಪ್ಪಳಿಸುತ್ತ ಹಾರುತ್ತ ಕಿಲಕಿಲನೆ ನಗುತ್ತ ನೀರು ಧುಮುಧುಮುಸಿ ಹರಿಯಿತು, ಕಾಲಿವೆಗಳಲ್ಲಿ, ಉಪಕಾಲಿವೆಗಳಲ್ಲಿ.

ಎಚ್ಚತ್ತ ಹಿರಿಯ. "ಓ!" ಎಂದ.

ಬಾಗಿದ್ದ ನಡು ನಿಡಿದುಕೊಂಡಿತು. ಜಡವಾಗಿದ್ದ ಕಾಲುಗಳು ಚೇತನಗೊಂಡವು.

ಮತ್ತೆ ಅಂದ: "ಓ! ಓ!"

ದೂರಕ್ಕೆ ದೂರಕ್ಕೆ--ಅತನ ಹೊಲಗಳಿದ್ದ ಕಡೆಗೂ-ನೀರು ಧಾವಿಸುತ್ತಿತ್ತು.

ಬೇರೊಂದನ್ನೂ ಗಮನಿಸದೆ ಹಿರಿಯ ಆ ನೀರನ್ನೆ ನೋಡಿದ; ಆ ನೀರಿನ ಹಿಂದೆಯೇ ಓಡಿದ.

ತಂದೆಯಷ್ಟೇ ವೇಗವಾಗಿ ಓಡುವುದು ರಾಮನಿಗೂ ಕಷ್ಟವೆನಿಸಿತು.

...ಗುಡಿಸಲ ಮುಂದೆ ರಾಮನ ತಾಯಿ ನಿಂತಿದ್ದಳು. ಚಿಕ್ಕ ಹುಡುಗನಂತೆ ಓಡುತ್ತ ಬಂದ ಗಂಡನನ್ನು ನೋಡಿ ಅಕೆಯೆಂದಳು:

“ಲಚ್ಚಿಗೆ ಎರಿಗೆಯಾಯ್ತು! ಗಂಡು ಮಗು!"

“ಓ!" ಎಂದ ಹಿರಿಯ. ಧಾರಾಕಾರವಾಗಿ ಸುರಿಯುತ್ತಿದ್ದ ಕಂಬನಿಯನ್ನೊರಸಿಕೊಳ್ಳುತ್ತ.

-"ಓ ಓ!"

ಎಲ್ಲ ಬೇಗೆಯನ್ನೂ ಮರೆಸುವ ಹಾಗೆ ಬೀಸುತ್ತಿತ್ತು ತಣ್ಣನೆಯ ಗಾಳಿ. ವಾತಾವರಣ ತುಂಬಿತ್ತು, ಹಾಲುಹೊಳೆಯ ಜುಳುಜುಳು ಗೀತದಿಂದ. ಮಂದವಾಗಿ ಕಾಣಿಸುತ್ತಿದ್ದುವು, ಬಲು ದೂರದಲ್ಲಿ ಅಣೆಕಟ್ಟಿನ ದೀಪಮಾಲೆಗಳು.

ಮೇಲ್ಗಡೆ ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದುವು.

ಅವುಗಳನ್ನೇ ಮುಗ್ಧನಾಗಿ ಹಿರಿಯ ನೋಡಿದ.

ಪಶ್ಚಿಮದಲ್ಲಿ ಒಂಟಯಾಗಿಯೆ ಇದ್ದೊಂದು ನಕ್ಷತ್ರ ಅವನನ್ನು ಕಂಡು ನಕ್ಕಿತು.

ಅದನ್ನು ಗಮನಿಸಿದ ಹಿರಿಯ ರುಮಾಲನ್ನೆಳೆದು, ತಲೆಯಾಡಿಸುತ್ತ, ಅಂದ:

“ಉಚ್ಮುಂಡೆ!"

ಆ ನಕ್ಷತ್ರ ಮತ್ತೆ ನಕ್ಕಿತು.

__೧೯೫೭