ಪುಟ:KELAVU SANNA KATHEGALU.pdf/೮೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
66
ನಿರಂಜನ: ಕೆಲವು ಸಣ್ಣ ಕಥೆಗಳು
 

ಸುಕ್ಳುಗಳಿಲ್ಲದ ಸೊಂಪಾದ ಮುಖ; ಮೇಣದ ಬೊಂಬೆಯಂತಹ ದುಂಡಗಿನ ಮೃದುಶರೀರ. ಮುಗ್ಧ ಹಸುಳೆಯ ಛಾಯೆ ತುಟಗಲ್ಲಗಳಲ್ಲೆಲ್ಲ. ಮುಖದ ಮೇಲೆ ಬಿಳಿಯ ಬೆಳೆಯಿತ್ತು. ಸೋತು ಜೋತ ತೆಳ್ಳಗಿನ ಮೀಸೆ. ವಿರಳವಾಗಿ ಬೆಳೆದು ತಿಂಗಳಿಗೊಮ್ಮೆ ಕ್ಷೌರಿಕನ ಕತ್ತಿಗೆ ಬಲಿಯಾಗುತ್ತಿದ್ದ ಗಡ್ಡ. ಮಗುತನವನ್ನು ಮರೆಸಲು ಎಳೆಯನೊಬ್ಬ ಕೃತ್ರಿಮ ಗಡ್ಡ-ಮೀಸೆಗಳನ್ನು ಅಂಟಿಸಿಕೊಂಡಹಾಗಿತ್ತು, ಆ ನೋಟ. ಮಹಾ ಸಾತ್ವಿಕನಂತೆ ತೋರುತ್ತಲಿದ್ದ, ನಡುಎತ್ತರದ ಈ ಮನುಷ್ಯ...

'ಕುಕ್‌' 'ಕುಕ್‌'? ಸದ್ದು ಕೇಳಿಸತೊಡಗಿತು, ದೂರದೊಂದು ಹಿಟ್ಟಿನ ಗಿರಣಿಯಿಂದ.

'ಮಿಲ್‌ ಶುರುವಾಯ್ತು.'

ಗಿರಣಿಯ ಕೂಗಿನಿಂದ ಕೆರಳಿತೆನ್ನುವಂತೆ ಕತ್ತೆಯೊಂದು ಅರಚುತ್ತ ದೂರ ಸಾಗಿತು ಹತ್ತಿರದಿಂದ.

ಇಮಾಮ್‌ಸಾಬಿ ಕುಳಿತಿದ್ದ ಒರಗು ಬೆಂಚು ಹೊಸದು. ನಿಲ್ದಾಣದ ಹೊರ ಆವರಣದಲ್ಲಿ ಅಂತಹವು ಎರಡು ಇರಲೆಂದು ರೇಲ್ವೆ ಇಲಾಖೆಯವರು ತರಿಸಿ ಹಾಕಿದ್ದರು. ಅವುಗಳ ಮೇಲೆ ಕುಳಿತವರ ಕಣ್ಣಿಗೆ, ಹೊಸದಾಗಿ ನೆಟ್ಟು ಬೆಳೆಸಿದ್ದ ಹೂವಿನ ಗಿಡಗಳು ಕಾಣುತ್ತಿ ದ್ದುವು.. ದೀಪಸ್ತಂಭದ ಬುಡದಲ್ಲಿ ಮುಳ್ಳುತಂತಿಯ ವೃತ್ತದೊಳಗೆ ಬಂದಿಗಳಾಗಿ (ಸುರಕ್ಷಿತವಾಗಿ) ಬಣ್ಣ ಬಣ್ಣದ ಬಗೆಬಗೆಯ ಹೂಗಳಿದ್ದುವು. ಮೊಗ್ಗುಗಳು; ಅರೆಬಿರಿದ, ಪೂರ್ಣವಾಗಿ ಅರಳಿ ಬಾಡಿ ಜೋಲುತ್ತಿದ್ದ ಹೂಗಳು.

ವಯಸ್ಸಿನೊಡನೆ ಮಂದವಾಗುತ್ತ ನಡೆದಿದ್ದ ಇಮಾವ್‌ಸಾಬಿಯ ದೃಷ್ಟಿ, ಹೂವಿನ ಸಸಿಗಳ ಮೇಲೆ ಸೋಮಾರಿಯಂತೆ ಎರಗಿತು. ಆ ಸೊಬಗಿನ ಆಸ್ವಾದನೆ ಅವನ ಸಾಮರ್ಥ್ಯಕ್ಕೆ ನಿಲುಕದ್ದು. ನೋಟ ಪುಷ್ಪರಾಶಿಯ ಮೇಲಿದ್ದರೂ ಆತ ಯೋಚಿಸುತ್ತಿದ್ದುದು ಬೇರೆಯೇ ಒಂದು;

ಕಿರಿಯ ಮಗನ ಹೆಂಡತಿ ತುಂಬಿದ ಗರ್ಭಿಣಿ. ಬೀಬಿ ನುಡಿದಿದ್ದಳು---"ಇವತ್ತೋ ನಾಳೆಯೋ ಆಗಬಹುದು, ಚೊಚ್ಚಲು."

ಚೊಚ್ಚಲು--

ಆ ಅಂಶ ಮತ್ತೆ ಮತ್ತೆ ನೆನಪಾಗಿ, ಇಮಾಮ್‍ಸಾಬಿಯ ಒಳಗೆ ಚಳಿ ಚಳಿ ಎನಿಸುತ್ತಿತ್ತು.

ಅವನು ತಾತನಾಗಲಿದ್ದುದು ಅದೇ ಮೊದಲನೆಯ ಸಲವೇನೂ ಅಲ್ಲ. ಹಾಗೆ ನೋಡಿದರೆ, ರೆಂಬೆಗಳು ವಿಶಾಲವಾಗಿ ಹರಡಿದ್ದ ವೃಕ್ಷ ಆತ. ಆದರೇನು?