ಪುಟ:KELAVU SANNA KATHEGALU.pdf/೯೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
70
ನಿರಂಜನ: ಕೆಲವು ಸಣ್ಣ ಕಥೆಗಳು
 

ನೋಡುತ್ತ, ಪ್ಲಾಟ್‌ಫಾರ್ಮಿನುದ್ದಕ್ಕೂ ಆತ ನಡೆದುಹೋದ.

ಕಟ್ಟಡ ಮುಗಿದು ಕಪ್ಪು ಪಟ್ಟಿಯ ಬೇಲಿ ಮೊದಲಾದೆಡೆ, ಹೊರಗೆ ಬೆಳೆದು ಒಳಕ್ಕೂ ನೆರಳು ನೀಡಿದ್ದ ಹುಣಸೆಮರದ ಕೆಳಗೆ ಬೇಲಿಗೊರಗಿ ರುಮಾಲು ತೆಗೆದು ಕೆಳಕ್ಕೆಳೆದು, ಸುರಳಿ ಬಿಚ್ಚಿಕೊಂಡ ತುದಿಯಿಂದ ತಲೆಯನ್ನೂ ಮುಖವನ್ನೂ ಒರೆಸಿದ.

ಹೇಗೆ ಬೇಸ್ತು ಬಿದ್ದೆ ತಾನು!

ಹಿಂದೆಯೂ ಹತ್ತಾರು ಸಾರೆ ಆ ರೀತಿ ಅವನಿಗೆ ಆಗಿತ್ತು. ಗಾಢನಿದ್ರೆಯಲ್ಲೂ ಕನಸು ಕಂಡು. ಮೂಕನಂತೆ ಅಸ್ಪಷ್ಟ ಸ್ವರ ಹೊರಡಿಸುತ್ತ ಆತ ಗಡಬಡಿಸಿ ಎದ್ದುದಿತ್ತು. ಅವನು ಯುವಕನಾಗಿದ್ದಾಗ ಅವನ ಊರಿನಿಂದ ಕೆಲವೇ ಮೈಲುಗಳಾಚೆ ಸಂಭವಿಸಿದ್ದೊಂದು ರೈಲು ಅವಘಡದ ಪ್ರತಿಧ್ವನಿ ಅದಿಲ್ಲ. ಅಪಘಾತನನ್ನು ಕಣ್ಣಾರೆ ಕಂಡಿರಲಿಲ್ಲ ಇಮಾಮ್‌ಸಾಬಿ. ಆದರೂ ಅದು ಸಂಭವಿಸಿದ ಕೆಲವೇ ಗಂಟಿಗಳಲ್ಲಿ, ಆತ ಸ್ಥಳಕ್ಕೆ ಬಂದಿದ್ದ. ಕತ್ತಲಲ್ಲಿ ಬರಿಗಾಲಲ್ಲೇ ನಡೆದು ತಲುಪಿದ್ದ. ಮುಂದೆ ಕೆಲವೇ ನಿಮಿಷಗಳಲ್ಲಿ, ವೈದ್ಯಕೀಯ ಸಹಾಯವನ್ನೂ ಮತ್ತಿತರ ಪರಿಹಾರವನ್ನೂ ರಿಲೀಫ್‌ ಟ್ರೈನು ತಂದಿತ್ತು. ಅದರಲ್ಲಿದ್ದ ನಗರದ ರೈಲ್ವೆ ಆಳುಗಳನ್ನು ಇಮಾಮ್‌‌ಸಾಬಿ ಸೇರಿಕೊಂಡು ಆರ್ತರಿಗೆ ನೆರವು ನೀಡಿದ್ದ. ಮುಳುಗಿ ಸಾಯಲು ಸಾಕಷ್ಟು ನೀರಿಲ್ಲದ ನದಿ. ಆದರೂ ಹಳೆಯ ಸೇತುವೆ ಬಿರುಕುಬಿಟ್ಟು, ಎಂಜಿನ್‌ ಹಾಗೂ ಎದುರಿನ ಮೂರು ಡಬ್ಬಿಗಳು ಕೆಳಕ್ಕೆ ಉರುಳಿದ್ದುವು. ಪ್ರಯಾಣಿಕರ ಆಕ್ರಂದನ ಕರ್ಣ ಭೇದಕವಾಗಿತ್ತು. ಅವಸರ ಅವಸರವಾಗಿ ವ್ಯವಸ್ಥೆಗೊಳಿಸಿದ ಸರ್ಚ್ ಲೈಟುಗಳ ಬೆಳಕಿನಲ್ಲಿ, ಸಾವಿನ ಬೋನು ಕತ್ತರಿಗಳಲ್ಲಿ ಸಿಲುಕಿಕೊಂಡವರ-ಬದುಕಿ ಉಳಿದವರ- ರಕ್ಷಣೆಗಾಗಿ ಯತ್ನ ನಡೆಯಿತು. ಬಾಹುಗಳಲ್ಲಿ ನೂರು ಜನರ ಬಲವಿದ್ದವರಂತೆ ಇಮಾಮಸಾಬಿ ದುಡಿದ. ಬೆಳಕು ಹರಿದು ಸೂರ್ಯ ನಡುನೆತ್ತಿಗೆ ಬರುವ ಹೊತ್ತಿಗೆ ಆ ದುಡಿಮೆ ಮುಗಿಯಿತು. ಸತ್ತವರ ಶವಗಳೆಲ್ಲ ದೊರೆತಿದ್ಹುವು. ಐವತ್ತೆಂಟು ಜನ. ಗಂಭೀರ ಸ್ವರೂಪದ ಗಾಯಗಳಾಗಿದ್ದವರು ಇಪ್ಪತ್ತೆರಡು ಮಂದಿ. ಸಣ್ಣ ಪುಟ್ಟ ಗಾಯಗಳು ಇನ್ನೂ ಹಲವರಿಗೆ.

ಮುಂದೆ ಅನೇಕ ವರ್ಷಗಳ ನಂತರವೂ ಕನಸಿನಲ್ಲಿ ಕಾಣುವಷ್ಟು ಭೀಕರವಾಗಿತ್ತು ಆ ಫಟನೆ.

ಅಂದು ದುಡಿಮೆ ಮುಗಿದಾಗ, ಎಲ್ಲ ಬಳಲಿಕೆಯೂ ಒಟ್ಟಿಗೆ ಕಾಣಿಸಿಕೊಂಡು ಕಾಲು ಕಟ್ಟಿತು. ಅವಘಡದ ಸನ್ನಿವೇಶವನ್ನು ನೋಡಲೆಂದು ಇಮಾಮ್‌‌ಸಾಬಿ ಕುಳಿತ. ಮೈ ಥರಥರನೆ ನಡುಸುತ್ತಿತ್ತು. ತೀವ್ರಗೊಂಡಿದ್ದ