ಪುಟ:KELAVU SANNA KATHEGALU.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

74

ನಿರಂಜನ: ಕೆಲವು ಸಣ್ಣ ಕಥೆಗಳು

ಆತ ಮತ್ತೂ ಅಂದ:

"ಸರಿಯೇನಪ್ಪ?"

ಅಬ್ದುಲ್ಲನ ಕೆಕ್ಕರಗಣ್ಣನ್ನ ಲಕ್ಷ್ಯಕ್ಕೆ ತರದೆ ಇಮಾಮ್‌ಸಾಬಿಯೆಂದ:

"ಅನ್ನೆರಡನ್ನೆರಡಾಣೆ ಕೊಡಿ ಸೋಮಿ."

..ರೈಲು ಬಂದು ಹೋಯಿತು. ದೊರೆತ ಒಂದೂವರೆಯಿಂದ ಎಂಟಾಣೆಯ ನಾಣ್ಯವನ್ನು ಅಬ್ದುಲ್ಲ ಇಮಾಮ್‌ ಸಾಬಿಗೆ ಕೊಟ್ಟು, ಬಳಿಕ ತನ್ನ ಜೇಬಿನೊಳಗಿಂದ ಸಣ್ಣ ಪುಟ್ಟ ನಾಣ್ಯಗಳು ಕೆಲವನ್ನು ತೆಗೆದು ಮುದುಕನಿಗೆ ಕೊಡುತ್ತ ಅಂದ:

“ಇಪ್ಪತ್ತೈದು ನಯೇ ಸೈಸೆ...... ನೀನು ಬಾಯಿ ಮುಚ್ಕೊಂಡಿದ್ದಿದ್ದರೆ ಒಂದೊಂದು ರೂಪಾಯಿಯಾದರೂ ಬರ್‍ತಿತ್ತು."

“ಹೋಗಲಿ ಬಿಡು," ಎಂದ ಇಮಾಮ್‍ಸಾಬಿ.

ನಯೇ ಪೈಸೆಗಳ ಲೆಕ್ಕ ಅವನಿಗೆ ತಿಳಿಯದು. ಆದರೆ ತನ್ನ ಕಣ್ಣೆದುರಲ್ಲೇ ಬೆಳೆದ ಅಬ್ದುಲ್ಲನಾಗಲೀ ಹುಡುಗರಾಗಲೀ ತನಗೆ ಮೋಸಮಾಡಲಾರರೆಂಬ ವಿಶ್ವಾಸವಿತ್ತು ಅವನಿಗೆ.

ಇನ್ನೊಬ್ಬ ಹಮಾಲ ಅತ್ತ ಬರುತ್ತ ಅಂದ:

"ಪೂನಾ ಗಾಡಿ ತೊಂಬತ್ತು ಮಿನಿಟ್‌ ಲೇಟ್‌."

ಗಾಡಿ ತಡವಾಗುವುದಂತೂ ಹೊಸದಲ್ಲ. ತಡವಾಗದ ದಿನವಾದರೂ ಯಾವುದು? ಹತ್ತಿಪ್ಪತ್ತು ವರ್ಷಗಳ ಹಿಂದೆಯೊಂದು ಯುದ್ಧ ನಡೆದಿತ್ತಲ್ಲ? ಆಗ ಅಸ್ತವ್ಯಸ್ತವಾಗಿದ್ದ ರೈಲು ವ್ಯವಸ್ಥೆ ಸರಿ ಹೋಗಿಯೇ ಇರಲಿಲ್ಲ.

ನಿಲ್ದಾಣ ಮತ್ತೆ ನಿರ್ಜನವಾಯಿತು. ಮಾಸ್ತರರು ಊಟಕ್ಕೆ ಹೋದರು. ಇಬ್ಬರು ಹಮಾಲರು ಊಟಕ್ಕೆ ತೆರಳಿದರು. ಒಬ್ಬ ಪ್ಲಾಟ್‌ ಫಾರ್ಮಿನ ಮೇಲೆಯೇ ಒಂದೆಡೆ ಮೈ ಚೆಲ್ಲಿ, ಕೆಂಪು ರುಮಾಲನ್ನು ದಿಂಬಾಗಿ ಮಾಡಿ, ನಿದ್ದೆ ಹೋದ.

ಇಮಾಮ್‍ಸಾಬಿ ಪ್ಲಾಟ್‌ಫಾರ್ಮಿನ ಉತ್ತರ ತುದಿಗೆ ಸಾಗಿ, ಮರದ ನೆರಳಿನಲ್ಲಿ ಕುಳಿತ... ಅವನ ಬೀಬಿ ಊಟ ತರುತ್ತಿದ್ಹುದು ಆ ತಾಣಕ್ಕೆ. ಒಳಹಾದಿಯಾಗಿ ಅಲ್ಲಿಗೆ ಬರುತ್ತಿದ್ದಳು ಅಕೆ.

ಮರದ ಕೆಳಗೆ ಕುಳಿತು "ಅದೆಷ್ಟು ಹೊತ್ತಾಯಿತೋ. ಬೀಜಿ ಇಷ್ಟರಲ್ಲೇ ಬರಬೇಕಾಗಿತ್ತು. ಯಾಕೆ ಬರಲಿಲ್ಲ?

ಇಮಾಮ್‌ಸಾಬಿಯ ಗುಂಡಿಗೆ ಡವಡವನೆಂದಿತು.

ಬೇಲಿಯ ಪಟ್ಚಿಗಳೆಡೆಯಿಂದ ಅವನ ಕಣ್ಣುಗಳು, ಪೊದೆ ಪೊದರು