ಪುಟ:KELAVU SANNA KATHEGALU.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹಮಾಲ ಇಮಾಮ್‌‌ಸಾಬಿ

75

ಗಳನ್ನು ಬಳಸುತ್ತ ಸಾಗಿದ್ದ ಕಾಲುದಾರಿಯತ್ತ ಹರಿದುವು. ಮಬ್ಬು ಮಬ್ಬಾಗಿ ಕಾಣಿಸುತ್ತಿತ್ತು ಎಲ್ಲವೂ-ಹಸುರು ನೋಡಿ ನೋಡಿ ನೋವಾಗಲು ಅತ ಎವೆಮುಚ್ಚಿದ. ಗುಡ್ಡದಾಚೆಗಿಂದ ತಪ್ಪಿಸಿಕೊಂಡು ಬಂದ ಸಣ್ಣನೆಯ ತಂಗಾಳಿಯೊಂದು ಬೀಸಿದಂತೆ, ಸ್ವಲ್ಪ ಹಾಯೆನಿಸಿತು. ಯೋಚನೆಗಳ ಪೆಟ್ಟಿಗೆಯ ಮುಚ್ಚಳ ಮುಚ್ಚಿಕೊಂಡಿತು. ತಲೆ ಎದೆಯ ಮೇಲಕ್ಕೆ ತಾಗಿತು, ತೂಕಡಿಕೆ ಬಂತು.

"ಬಾಬಾ"
.............
"ಬಾಬಾ!"
ಇಮಾಮ್‌ಸಾಬಿ ಹೌಹಾರಿ ಎದ್ದ.
"ಏನಾಯ್ತು? ಏನಾಯ್ತು?"
"ನಾನು ಬಾಬಾ. ಊಟ ತಂದಿದೀನಿ."
"ಹ್ಞಾ..."

ಬೀಬಿಯ ಬದಲು ಮಗ ಕರೀಮನೇ ಬಂದಿದ್ದ.

ತಂದೆ ಕೇಳಲಿದ್ದ ಪ್ರಶ್ನೆಯನ್ನು ಮೊದಲೇ ಗ್ರಹಿಸುತ್ತ ಅವನೆಂದ:

"ಅವಳು ನೋವು ತೀನ್ತಾ ಇದ್ದಾಳೆ.

ವೃದ್ಧನ ಎದೆಗುಂಡಿಗೆ ಮತ್ತೆ ಬಲವಾಗಿ ಬಡಿದುಕೊಂಡಿತು.

"ಎಷ್ಟು ಒತ್ತಾಯ್ತು?”
"ಅತ್ತು ಗಂಟೆಯಿಂದ."
"ಸೂಲಗಿತ್ತಿ?"
"ಬಂದವಳೆ. ಚೊಚ್ಚಲು; ತಡವಾಗ್ಬೌದು ಅಂದ್ಲು."

ಬುತ್ತಿಯನ್ನು ಬಿಚ್ಚುತ್ತ ಇಮಾಮ್‌‌ಸಾಬಿಯೆಂದ:

"ಹೂಂ, ಹೂಂ."

ಬೀಬಿ ಬುತ್ತಿ ತಂದಾಗ, "ಕುಡಿಯುವ ನೀರು" ಎಂದು ಬರೆದ ಗಡಿಗೆಯತ್ತ ಇಮಾಮನೇ ಹೋಗಿ ನೀರು ತರುತ್ತಿದ್ದ. ಇಂದು, ಕಾಲುಗಳಲ್ಲಿ ಬಲವೇ ಇಲ್ಲ-ಎನಿಸಿತು. ಅಲ್ಲದೆ-ಬಳಿಯಲ್ಲೆ ಮಗನಿದ್ದ.

"ನೀರು ತಾ."

ನಜ್ಜುಗುಜ್ಜಾಗಿದ್ದ 'ಎಲ್ಮಿನಿ' ತಟ್ಟಿಯಲ್ಲಿ ಕರೀಂ ನೀರು ಹಿಡಿದ ತಂದ.

....ಊಟ ಮುಗಿದಾಗ ತಂದೆ ಮಗಳಿಗೆ ಅಂದ:

"ನೀನು ಮನೇಲೇ ಇರು."