ಬೆಳೆಯುವ ಬೆಳಕು
೧
“ಶ್ರೀಶೈಲದಿಂದ ಗುರುಗಳು ಬಂದಿದ್ದಾರೆ” ಎಂಬ ಮಾತು ಮಹಾದೇವಿಯ ಕಿವಿಗೆ ಅಮೃತವನ್ನೂಡಿಸಿದಂತಾಯಿತು. ಅದನ್ನೇ ಮತ್ತೆ ಮತ್ತೆ ಜಪಿಸುತ್ತಾ ಮನೆಯ ಕಡೆಗೆ ಓಡಿದಳು, ಗೆಳೆಯರು ಕರೆಯುತ್ತಿರುವುದನ್ನೂ ಲೆಕ್ಕಿಸದೆ.
ತನ್ನ ಗೆಳತಿಯರೊಡನೆ ಊರ ಮುಂದಿರುವ ಉದ್ಯಾನಕ್ಕೆ ಹೋಗಿದ್ದ ಮಹಾದೇವಿ, ಅಲ್ಲಿಂದ ಬರುವಾಗ ಹೂವುಗಳ ಜೊತೆಯಲ್ಲಿ ಅವುಗಳಿಗಿಂತಲೂ ಮಿಗಿಲಾಗಿ ಪರಿಮಳದ ಆನಂದವನ್ನು ಬೀರಬಲ್ಲ ಈ ವಾರ್ತೆಯನ್ನು ತಂದಿದ್ದಳು.
ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಹೇಳಿದಳು:
“ಅವ್ವಾ ಶ್ರೀಶೈಲದಿಂದ ಗುರುಗಳು ಬಂದಿದ್ದಾರಂತೆ!” -ಧ್ವನಿಯಲ್ಲಿ ಉತ್ಸಾಹ ಉಕ್ಕುತ್ತಿತ್ತು.
“ಆ್ಞಂ! ಗುರುಗಳು ಬಂದಿದ್ದಾರೆಯೇ? ಯಾರು ಹೇಳಿದರು, ಮಹಾದೇವಿ?” ಎಂದು ಕೇಳುತ್ತಾ ಲಿಂಗಮ್ಮ ಪೂಜೆಯ ತಟ್ಟೆಯನ್ನು ಹಿಡಿಕೊಂಡೇ ಪೂಜೆಯ ಕೋಣೆಯಿಂದ ಹೊರಗೆ ಬಂದಳು.
ಬೆಳಗಿನ ಸ್ನಾನವನ್ನು ಮುಗಿಸಿ, ಪೂಜೆಯ ಕೋಣೆಯ ಕಡೆಗೆ ಬರುತ್ತಿದ್ದ ಓಂಕಾರಶೆಟ್ಟಿಯ ಕಿವಿಯ ಮೇಲೂ ಈ ಮಾತು ಬಿದ್ದಿತು.
“ಹೌದೇನು ಮಹಾದೇವಿ. ಯಾರು ಹೇಳಿದರು?”-ಅವನಿಗೂ ತಡೆಯಲಿಲ್ಲ ಕುತೂಹಲ. ಶಿವನ ಸ್ತುತಿರೂಪವಾದ ಗೀತೆಯನ್ನು ಹೇಳುತ್ತಿದ್ದ ನಾಲಿಗೆ ಕ್ಷಣಕಾಲ ಅದನ್ನು ನಿಲ್ಲಿಸಿ ಕೇಳಿತು ಈ ಪ್ರಶ್ನೆಯನ್ನು.
ಹೇಳಿದಳು ಮಹಾದೇವಿ:
“ಉದ್ಯಾನದಲ್ಲಿ ಹೂವುಗಳನ್ನು ಎತ್ತುತ್ತಿದ್ದೆ. ಮಠದ ಕಡೆಯಿಂದ ಗುರುಪಾದಪ್ಪ ಬರುತ್ತಿದ್ದ. ಅವನೇ ಹೇಳಿದ: ‘ಶ್ರೀಶೈಲದಿಂದ ಗುರುಗಳು ಬಂದಿದ್ದಾರೆ, ಮನೆಯಲ್ಲಿ ಹೇಳಮ್ಮ’ ಎಂದು. ಹಾಗೆಯೇ ಓಡಿಬಂದೆ. ನಿನ್ನೆ ರಾತ್ರಿಯೇ ಬಂದರಂತೆ.
‘ಶ್ರೀಶೈಲದಿಂದ ಗುರುಗಳು ಬಂದಿದ್ದಾರೆ’ ಎಂಬ ಮಾತು, ಈ ಚಿಕ್ಕಸಂಸಾರದಲ್ಲಿ ಆನಂದದ ತೆರೆಗಳನ್ನು ಎಬ್ಬಿಸಿತ್ತು. ಈಗ ಐದಾರು ತಿಂಗಳುಗಳ