"ಅದಕ್ಕಿಂತ ಹೆಚ್ಚಾಗಿ ಶ್ರೀಶೈಲದ ಜಪ ಮಾಡಿದ್ದಾಳೆ ಗುರುಗಳೇ" ಎಂದು ನಗುತ್ತಾ ಹೇಳಿದ ಓಂಕಾರ.
"ಇಲ್ಲ ಗುರುಗಳೇ. ನೀವು ಕೊಟ್ಟು ಹೋದ ಓಲೆಗರಿಯಲ್ಲಿದ್ದ ವಚನಗಳನ್ನೆಲ್ಲಾ ಕಲಿತಿದ್ದೇನೆ. ಬೇಕಾದರೆ ಹೇಳಲೇ...." ಎಂದು ತನ್ನ ಮುಗ್ಧ ಕಣ್ಣುಗಳನ್ನು ತಂದೆಯ ಕಡೆಗೆ ಬೀರುತ್ತಾ,
"ಇವರು ಯಾವಾಗಲೂ ಹೀಗೆ.... ಏನಾದರೂ ಹೇಳೋದು...."
ಎಲ್ಲರೂ ನಕ್ಕರು ಓಂಕಾರನೂ ಸೇರಿಕೊಂಡು. ಗುರುಗಳೂ ಅದಕ್ಕೆ ಹೊರತಾಗಿರಲಿಲ್ಲ. ಮತ್ತೆ ಮಹಾದೇವಿ ಕೇಳಿದಳು:
"ಹೇಳುತ್ತೇನಮ್ಮಾ" ಎನ್ನುತ್ತಿದ್ದಂತೆಯೇ ಗುರುಗಳ ಮುಖ ಗಂಭೀರವಾಯಿತು. "ಅದಕ್ಕಾಗಿಯೇ ನಿನ್ನನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಎಲ್ಲವನ್ನೂ ವಿವರವಾಗಿ ನಿರೂಪಿಸುತ್ತೇನೆ."
ಎಲ್ಲರೂ ಕುತೂಹಲದಿಂದ ಗುರುಗಳನ್ನೇ ನೋಡುತ್ತಿದ್ದರು. ಲಿಂಗಮ್ಮ ಬಂದು ಗುರುಗಳ ಪಾದಗಳಿಗೆ ನಮಸ್ಕರಿಸಿದಳು. ಎಲ್ಲರಿಗೂ ಅರ್ಥವಾಯಿತು, ಪ್ರಸಾದದ ಸಮಯವೆಂದು.
ಮಹಾದೇವಿಯನ್ನು ಕುರಿತು ಮುಗುಳನಗುತ್ತಾ ಹೇಳಿದಳು ಲಿಂಗಮ್ಮ.
"ಆಗಲೇ ಶ್ರೀಶೈಲದ ಕಥೆ ತೆಗೆದಿದ್ದಾಳೆ! ಏನು ಮಹಾದೇವಿ, ಹೀಗೇ ಏನು ನೀನು ಗುರುಗಳನ್ನು ಉಪಚರಿಸುವುದು?"
ಮಹಾದೇವಿಗೂ ಅರ್ಥವಾಯಿತು. ಥಟ್ಟನೆ ಎದ್ದು ಒಳಗೆ ನಡೆದಳು. ಅಲ್ಲಿ ಇದ್ದವರನ್ನು ಉದ್ದೇಶಿಸಿ ಗುರುಗಳು ಹೇಳಿದರು:
"ಈ ಮಹಾದೇವಿಯ ಆತ್ಮಸಂಸ್ಕಾರ ಬಹಳ ದೊಡ್ಡದು. ಶ್ರೀಶೈಲದ ಮಲ್ಲಿಕಾರ್ಜುನನೊಡನೆ ಈ ಎಳೆಯ ಚೇತನದ ಸಂಬಂಧ ಬಹಳ ಗಾಢವಾದುದು. ಇದನ್ನು ನಾನು ಶ್ರೀಶೈಲದಲ್ಲಿ ಕಂಡುಕೊಂಡೆ."
ಎಲ್ಲರೂ ತಬ್ಬಿಬ್ಬಾದರು. ಸಾವಿರಾರು ಮೈಲುಗಳ ದೂರದಲ್ಲಿರುವ ಶ್ರೀಶೈಲದಲ್ಲಿ ಇವರು ಅದನ್ನು ಕಂಡುಕೊಂಡುದು ಹೇಗೆ? ಗುರುಗಳ ಮಾತು ಅವರಿಗೆ ಒಗಟಿನಂತೆ ತೋರಿತು. ಅದನ್ನು ಅರಿತ ಗುರುಗಳು:
"ಅದೊಂದು ಅಲೌಕಿಕವಾದ ಅನುಭವ; ಓಂಕಾರ, ಇಂತಹ ಮಗಳನ್ನು ಪಡೆದ ನೀನು ಧನ್ಯನೆಂದು ತಿಳಿ. ಸದ್ಯಕ್ಕೆ ಅಷ್ಟು ಸಾಕು, ಏಳಿರಿ."
ಎನ್ನುತ್ತಾ ಮೇಲೆದ್ದರು. ಎಲ್ಲರೂ ಗುರುಗಳನ್ನು ಹಿಂಬಾಲಿಸಿದರು. ಪ್ರಸಾದವನ್ನು ಸ್ವೀಕರಿಸುವುದಕ್ಕಾಗಿ.