ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬಲೆ
೯೯

ಮಹಾದೇವಿಗೆ ಮಾತು ಚುಚ್ಚಿತು.
"ನಿಮ್ಮ ಮಗಳು ಲೋಕಕ್ಕೆ ವಿರುದ್ಧವಾದ ಮನೋಧರ್ಮವನ್ನುಳ್ಳವಳು ಎಂದು ಲೋಕ ಇಂದಲ್ಲದಿದ್ದರೆ ನಾಳೆ ಕಂಡುಕೊಂಡೀತು. ಅದಕ್ಕಾಗಿ ದುಃಕಿಸಬೇಡ, ಅವ್ವಾ. ನಿಮ್ಮ ಗೌರವಕ್ಕೆ ಕುಂದು ಬರದ ಹಾಗೆ ವರ್ತಿಸುತ್ತೇನೆ. ಇನ್ನು ನಾನು ಬರುತ್ತೇನೆ ಎಂದು ತಂದೆತಾಯಿಗಳಿಬ್ಬರಿಗೂ ನಮಸ್ಕರಿಸಿದಳು. ಮತ್ತೆ ಹೇಳಿದಳು:
"ನನ್ನನ್ನು ನೋಡಲು ಅರಮನೆಗೆ ಬನ್ನಿ ಎಂದು ಹೇಗೆ ನಿಮ್ಮನ್ನು ಕರೆಯಲಿ ? ನಿಮಗೆ ತಕ್ಕ ಮಗಳಾಗುವಂತೆ ಆಶೀರ್ವದಿಸಿ ಎನ್ನುತ್ತಿದ್ದಂತೆಯೇ ಅವಳ ಕಣ್ಣಿನಿಂದ ನೀರು ಉಕ್ಕಿಬಂದಿತು. ತನಗಾಗಿ ಕಾಯುತ್ತಿದ್ದ ಮೇನೆಯನ್ನು ಪ್ರವೇಶಿಸಿ ಕುಳಿತಳು. ಮೇನೆಯ ಬಾಗಿಲು ಮುಚ್ಚಿತು. ಬೋಯಿಗಳು ಹೊತ್ತರು ಮೇನೆಯನ್ನು.
ತಮ್ಮ ಕರುಳಿನ ಕುಡಿಯೇ ಕಿತ್ತು ಹೋಗುತ್ತಿರುವಂತೆ ಅಶ್ರು ತುಂಬಿದ ಕಣ್ಣುಗಳಿಂದ ಓಂಕಾರ-ಲಿಂಗಮ್ಮ ನಿಸ್ಸಹಾಯಕರಾಗಿ ಅತ್ತಲೇ ನೋಡುತ್ತಿದ್ದರು.
ಓಂಕಾರನ ಮನೆಯ ಮುಂದೆ ಸೇರಿದ ನೆರವಿಯೂ ಈ ದುಃಖದಲ್ಲಿ ಭಾಗಿಯಾಗಿತ್ತು.
ಈ ಸಾತ್ವಿಕ ದಂಪತಿಗಳಿಗೆ ಬಂದ ಅನಿರೀಕ್ಷಿತ ದುಃಖವನ್ನು ಕಂಡು ಕೆಲವರಿಗೆ ನಿಜವಾಗಿಯೂ ಸಂತಾಪವಾಗಿದ್ದರೆ, ಇನ್ನು ಕೆಲವರಿಗೆ ಈ ತಮಾಷೆಯನ್ನು ನೋಡುವುದರಲ್ಲಿ ಸಂತೋಷವೇ ಇತ್ತು. ಅವರಿಗೆ ಅನುಕಂಪವನ್ನು ತೋರಿಸುವ ನೆವದಿಂದ ಸಮಾಧಾನವನ್ನು ಪಡೆಯುತ್ತಿದ್ದರು.
ಬಂಗಾರಮ್ಮ - ನಂಜಮ್ಮ ಇವರು ಲಿಂಗಮ್ಮನ ಬಳಿಗೆ ಬಂದಿದ್ದ ಉದ್ದೇಶವಾದರೂ ಅದೇ. ವಿಷಯ ತಿಳಿದೊಡನೆ ತಮ್ಮ ಮನೆಯ ಕೆಲಸವನ್ನೆಲ್ಲಾ ಬಿಟ್ಟು ಬಂದಿದ್ದರು ಬಾಯಿಚಪಲ ತೀರಿಸಿಕೊಳ್ಳುವುದಕ್ಕಾಗಿ. ಮನೆಗೆ ಬಂದವರೆಂಬ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಲಿಂಗಮ್ಮ ಅವರೊಡನೆ ಮಾತನಾಡಿ ಕಳುಹಿಸದೇ ವಿಧಿಯಿಲ್ಲವಾಗಿತ್ತು.
"ನೀ ಏನೇ ಹೇಳು ಲಿಂಗಮ್ಮ, ಮಹಾದೇವಿಯನ್ನು ಹಾಗೆ ಕಳುಹಿಸಬಾರದಾಗಿತ್ತು. ಉಪದೇಶ ಮಾಡಿದಳು ಬಂಗಾರಮ್ಮ.
'ಮಗಳಿಗೆ ನೀವು ಕೊಟ್ಟ ಸ್ವಾತಂತ್ರ್ಯ ಅತಿಯಾಯಿತು. ಅದೇ ಇದಕ್ಕೆಲ್ಲಾ ಕಾರಣ. ಈ ಮೊದಲೇ ಮದುವೆ ಅಂತ ಒಂದು ಮಾಡಿಬಿಟ್ಟಿದ್ದರೆ, ಇದಕ್ಕೆಲ್ಲಾ ಆಸ್ಪದವೇ ಇರಲಿಲ್ಲ.' ಇವರನ್ನೇ ಅಪರಾಧಿಗಳನ್ನಾಗಿ ಮಾಡಿ ಚುಚ್ಚಿದಳು ನಂಜಮ್ಮ.