ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬಲೆ
೧೦೧


ಕಾರ್ಯದಲ್ಲಿ ತತ್ಪರರಾಗಿದ್ದರು. ಕೆಂಪು ನಡೆಮಡಿ, ಮೆಟ್ಟಲುಗಳನ್ನು ಏರಿ ಅರಮನೆಯನ್ನು ಪ್ರವೇಶಿಸಿತ್ತು. ಇಕ್ಕೆಲಗಳಲ್ಲೂ ನಿಂತ ದಾಸಿಯರು ಹೂವುಗಳನ್ನು ಎರಚುತ್ತಾ ಮಹಾದೇವಿಯನ್ನು ಸ್ವಾಗತಿಸುತ್ತಿದ್ದರು. ಮಂತ್ರಿ ಮೊದಲಾದ ಅಧಿಕಾರಿಗಳೆಲ್ಲಾ ವಿನಯಪೂರ್ವಕವಾಗಿ ಬಾಗಿ ನಮಸ್ಕರಿಸುತ್ತಿದ್ದರು. ಅತಿ ಸಾಮಾನ್ಯವಾದ ಉಡುಗೆಯನ್ನು ಉಟ್ಟಿದ್ದರೂ ಅದರ ಹಿಂದಿರುವ ಅಸಾಮಾನ್ಯವಾದ ಸೌಂದರ್ಯಸಂಪತ್ತನ್ನು ಕಂಡು, ಗೌರವದಿಂದ ತಲೆಬಾಗಿದ್ದರು..


ಮಹಾದೇವಿ ದಿಗ್ಭ್ರಮೆಗೊಂಡು ಇದನ್ನೆಲ್ಲಾ ನೋಡುತ್ತಿದ್ದಳು. ವಸಂತಕ ಮುಂದೆ ಬರುತ್ತಾ:.

``ದಯಮಾಡಿಸಬೇಕು ತಾಯಿ, ದಯಮಾಡಿಸಬೇಕು..

ಎಂದು ತಾನು ಮುಂದೆ ನಡೆಯತೊಡಗಿದ., ನಡೆಮಡಿಯ ಪಕ್ಕದಲ್ಲಿ. ಮಹಾದೇವಿ ನಡೆಮಡಿಯ ಮೇಲೆ ನಡೆಯತೊಡಗಿದಳು. ದಾಸಿಯರು ಹೆಜ್ಜೆ ಹೆಜ್ಜೆಗೂ ಹೂವುಗಳನ್ನು ಎರಚುತ್ತಿದ್ದರು.

ಅರಮನೆಯನ್ನು ಪ್ರವೇಶಿಸಿದರು. ವಿಶಾಲವಾದ ತೊಟ್ಟಿಯನ್ನು ದಾಟಿ ಒಳಗೆ ನಡೆದರು. ಅಲ್ಲಿ ಪಕ್ಕಕ್ಕೆ ತಿರುಗಿದರು. ಅರಮನೆಯ ವೈಭವ ವಿಲಾಸಗಳನ್ನೆಲ್ಲಾ ನೋಡುತ್ತಾ ಮಹಾದೇವಿ ಗಂಭೀರವಾಗಿ ಮೆಲ್ಲನೆ ಮೆಲ್ಲನೆ ನಡೆಯುತ್ತಿದ್ದಳು.

ಎಲ್ಲರೂ ತನಗೆ ತೋರಿಸುತ್ತಿದ್ದ ಗೌರವ ವಿನಯಗಳು ಆಕೆಗೆ ಸಂಕೋಚವನ್ನುಂಟು ಮಾಡಿದ್ದುವು. ಆದರೆ ಅದರ ಹಿಂದಿರಬಹುದಾದ ಕಾರಣವನ್ನು ಊಹಿಸಿದಾಗ ಅವಳಿಗೆ ಸಮಸ್ಯೆಯ ಗಂಭೀರ ಸ್ವರೂಪ ಕಣ್ಣ ಮುಂದೆ ಸುಳಿಯಿತು. ಇದರಿಂದ ಪಾರಾಗುವುದು ಹೇಗೆಂಬ ಆಲೋಚನೆ ಮಿಂಚಿನಂತೆ ಸುತ್ತಿತು.

ಈಗ ಮಹಾದೇವಿ ಒಂದು ಕೋಣೆಯನ್ನು ಪ್ರವೇಶಿಸುತ್ತಿದ್ದಳು. ಅಲ್ಲಿಯವರೆಗೂ ಬಂದ ನಡೆಮಡಿ ಅಲ್ಲಿ ನಿಂತಿತ್ತು. ಸೇವಕರೆಲ್ಲಾ ಹಿಂದೆ ಉಳಿದರು. ವಸಂತಕನು ಮಾತ್ರ ಒಳಗೆ ಪ್ರವೇಶಿಸಿದ.

``ಒಳಗೆ ದಯಮಾಡಿಸಬೇಕು ಎಂದು ಮಹಾದೇವಿಯನ್ನು ಕರೆದ. ಅನುಮಾನಿಸುತ್ತಲೇ ಮಹಾದೇವಿ ಒಳಗೆ ಕಾಲಿಟ್ಟಳು.

ಅವಳ ಅನುಮಾನ ನಿಜವೇ ಆಗಿತ್ತು. ಅಲ್ಲಿಯೇ ಕುಳಿತಿದ್ದ ಕೌಶಿಕ. ಮಹಾದೇವಿಯನ್ನು ಕಾಣುತ್ತಲೇ ಥಟ್ಟನೆ ಎದ್ದು ನಿಂತ.

ಮಹಾದೇವಿಯ ಮನಸ್ಸನ್ನು ಅರಿತವನೋ ಎಂಬಂತೆ ಕೌಶಿಕ ಆಡಂಬರವಿಲ್ಲದೆ ಅತಿ ಸರಳವಾದ ರೀತಿಯಲ್ಲಿ ಅಲಂಕರಿಸಿಕೊಂಡಿದ್ದ. ಆದರೆ