ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೨
ಕದಳಿಯ ಕರ್ಪೂರ


ಮಹಾದೇವಿಯ ಸರಳತೆಯನ್ನು ಕಂಡು, ತನ್ನದು ಅತಿ ಆಡಂಬರವೆನಿಸಿತು ಆತನಿಗೆ. ಅವಳ ಸರಳತೆ ಚಕಿತಗೊಳಿಸಿತು ಆತನನ್ನು.
ಉಟ್ಟ ಒರಟು ಸೀರೆಯೊಂದೇ ಅವಳ ಅಲಂಕಾರ, ತಲೆತುಂಬಾ ಮುಸುಗು, ಪೂಜೆಯ ಸಮಯದಲ್ಲಿ ಧರಿಸಿದ ವಿಭೂತಿ, ಹಣೆಯ ಮೇಲೆ ಅಚ್ಚಳಿಯದೆ ಉಳಿದು, ಶಿವನನ್ನು ಪತಿಯನ್ನಾಗಿ ಪಡೆದ ಅವಳ ಮುತ್ತೈದೆತನಕ್ಕೆ ಸಾಕ್ಷಿಯೆಂಬಂತಿತ್ತು. ಯಾವ ಅಲಂಕಾರಗಳೂ ತಂದುಕೊಡಲಾಗದ ಒಂದು ಆಕರ್ಷಕವಾದ ಸೌಂದರ್ಯವನ್ನು ಮತ್ತು ಗೌರವವನ್ನು ಅವಳ ಮುಖ ಮತ್ತು ಕಣ್ಣುಗಳು ಹೊರಸೂಸುತ್ತಿದ್ದುವು.
ತನ್ನನ್ನು ಕ್ಷಣಮಾತ್ರದಲ್ಲಿ ಆಕರ್ಷಿಸಿ ಸೆರೆಹಿಡಿದ ಆ ಕಣ್ಣುಗಳನ್ನು ಕೌಶಿಕ ಇಂದು ಹತ್ತಿರದಿಂದ ನೋಡಿದ. ದೃಷ್ಟಿಗಳು ಪರಸ್ಪರ ಸಂಧಿಸಿದುವು. ಮಹಾದೇವಿ ಕುತೂಹಲದಿಂದ ನೆಟ್ಟ ದೃಷ್ಟಿಯಿಂದ ಕೌಶಿಕನನ್ನು ನೋಡತೊಡಗಿದ್ದಳು. ರಸಿಕತೆಯನ್ನುಕ್ಕಿಸುವ ವಿಲಾಸವಿಭ್ರಮದ ನೋಟವಲ್ಲ ಅದು. ತನ್ನಿಂದ ನಿಷ್ಕಾರಣವಾಗಿ ನೊಂದ ಮುಗ್ಧೆಯೊಬ್ಬಳ ಅಂತರಂಗದ ಹಿಂದಿರುವ ವೇದನೆ ಕಾಣಿಸಿದಂತಾಯಿತು ಕೌಶಿಕನಿಗೆ.
"ನನ್ನ ಕರೆಗೆ.... ಓಗೊಟ್ಟು ಬಂದುದು... ನನ್ನ ಭಾಗ್ಯ. ತಾನು ಮೊದಲೇ ಆಲೋಚನೆ ಮಾಡಿಟ್ಟುಕೊಂಡ ಮಾತುಗಳನ್ನೆಲ್ಲಾ ಮರೆತು ಮಕ್ಕಳಂತೆ ತೊದಲಿದ ಕೌಶಿಕ.

ಮಹಾದೇವಿ ಗಂಭೀರಳಾಗಿ ಹೇಳಿದಳು :
"ರಾಜರು ಹೇಳಿಕಳುಹಿಸಿದರೆ ಬರಬೇಕಾದುದು ಪ್ರಜೆಗಳ ಕರ್ತವ್ಯ.
ಈ ವೇಳೆಗೆ ಕೌಶಿಕನೂ ಎಚ್ಚೆತ್ತುಕೊಂಡು ತನ್ನ ಗಾಂಭೀರ್ಯವನ್ನು ಹಿಂದಕ್ಕೆಳೆದುಕೊಳ್ಳುತ್ತಾ ಹೇಳಿದ : ``ನಿಮ್ಮಂತಹ ರಾಜನಿಷ್ಠ ಪ್ರಜೆಗಳನ್ನು ಪಡೆದು ನಾನು ಧನ್ಯನಾದೆ,"
ಅವನ ಕಡೆಗಣ್ಣುಗಳು ಮಹಾದೇವಿಯ ಸೌಂದರ್ಯವನ್ನು ಪಾನಮಾಡಲು ಹಾತೊರೆಯುತ್ತಿದ್ದವು. ಮಹಾದೇವಿ ಅದನ್ನರಿತು ಹೇಳಿದಳು :
"ಪ್ರಜೆಗಳ ನಿಷ್ಠೆಯನ್ನು ಬಯಸುವ ರಾಜರು, ಆ ಪ್ರಜೆಗಳನ್ನು ನೋಡುವ ದೃಷ್ಟಿ ಹೇಗಿರಬೇಕೆಂಬುದನ್ನು ಅರಿತಿರಬೇಕು.
"ನಿಜ, ನಾನು ಪ್ರಜೆಗಳನ್ನು ಅದೇ ದೃಷ್ಟಿಯಿಂದ ನೋಡುತ್ತಿದ್ದೇನೆ. ಕೌಶಿಕ ಹೇಳಿದ.