``ಯಾವ ದೃಷ್ಟಿಯಿಂದ? ಈಗ ನನ್ನನ್ನು ನೋಡುತ್ತಿರುವ
ದೃಷ್ಟಿಯಿಂದಲೇ?- ಮಹಾದೇವಿಯ ಮಾತಿನಲ್ಲಿ ವ್ಯಂಗ್ಯವಿತ್ತು.
``ಇಲ್ಲ, ಮಹಾದೇವಿ : ನಾನು ನಿನ್ನನ್ನು ನೋಡಿದ ದೃಷ್ಟಿ ಅಪೂರ್ವವಾದುದು, ಅದ್ವಿತೀಯವಾದುದು. ಅಮರಪ್ರೇಮದಿಂದ ಪ್ರೇರಿತವಾದುದು? - ಕೌಶಿಕನ ಧ್ವನಿಯಲ್ಲಿ ಭಾವುಕತೆಯಿತ್ತು.
``ಹೌದು.... ಹೌದು.... ತಮ್ಮ ಕ್ಷುದ್ರಸುಖವನ್ನು ಮುಚ್ಚಿಕೊಳ್ಳುವುದಕ್ಕೆ `ಅಮರಪ್ರೇಮ' ಎಂಬ ಶಬ್ದ ಪ್ರಯೋಗ ಅನೇಕ ಬಾರಿ ನಡೆದು ಅದರ ಕಾಂತಿ ಮಸುಳಿಸಿದೆ. ಇದು ಇಂತಹ ಇನ್ನೊಂದು ಉದಾಹರಣೆ. ನೀವು ನನ್ನನ್ನು ಈ ದೃಷ್ಟಿಯಿಂದ ನೋಡುವುದಕ್ಕೆ ಮುನ್ನ ಆಲೋಚಿಸಬೇಕಾಗಿತ್ತು. ನನಗೆ ಮದುವೆಯಾಗಿದೆ. ಮದುವೆಯಾದ ಹೆಣ್ಣನ್ನು....
ಕೌಶಿಕ ಬೆಚ್ಚಿಬಿದ್ದು ಮಧ್ಯದಲ್ಲಿಯೇ ಕೇಳಿದ :
``ಆಂ ! ನಿನಗೆ ಮದುವೆಯಾಗಿದೆಯೆ ? ಯಾವಾಗ ? ಯಾರೊಡನೆ?" ಧ್ವನಿಯಲ್ಲಿ ಕಾತರತೆ ಉದ್ವೇಗಗಳು ತುಂಬಿದ್ದುವು.
``ನಾನು ಎಂಟು ಹತ್ತು ವರ್ಷದವಳಿರುವಾಗಲೇ ನನ್ನ ಮದುವೆಯಾಯಿತು, ಲಿಂಗಪತಿಯೊಡನೆ. ಗಂಭೀರವಾಗಿ ಹೇಳಿದಳು.
ಕೌಶಿಕ ಕ್ಷಣಕಾಲ ಆಲೋಚಿಸಿದ. ಅನಂತರ ಗಹಗಹಿಸಿ ನಗುತ್ತಾ ಹೇಳಿದ: ``ಹಾಗೋ ! ಸರಿ.... ಸರಿ.... ಆ ಪತಿ, ಪರಲೋಕವೆಂಬುದೊಂದು ಇರುವುದಾದರೆ, ಅಲ್ಲಿ ಅವನು ನಿನ್ನ ಪತಿಯಾಗುವನು.
``ಪರಲೋಕಕೊಬ್ಬ, ಇಹಲೋಕಕೊಬ್ಬ - ಎಂದು ಗಂಡಂದಿರನ್ನು ಬಯಸುವವಳು ನಾನಲ್ಲ ನನಗೊಬ್ಬನೇ ಪತಿ ; ಅವನು ಚೆನ್ನಮಲ್ಲಿಕಾರ್ಜುನ.
ಭಾವಪರವಶಳಾಗಿ ಕೈಯೆತ್ತಿ ಸಾರುವಂತೆ ಈ ಮಾತನ್ನು ಹೇಳಿದಳು ಮಹಾದೇವಿ.
ತಲೆಯ ಮೇಲಿನ ಮುಸುಗು ನಸುಜಾರಿ ಭುಜದ ಮೇಲೆ ಇಳಿದಿತ್ತು. ರಸಿಕ ರಾಜನ ದೃಷ್ಟಿ ಜಾಗ್ರತವಾಗಿ ಅವಳ ಮಾತುಗಳ ಕಡೆಗಿಂತ ಅವಳ ಅಂಗಾಂಗಗಳ ಸೌಂದರ್ಯದ ಸವಿಯನ್ನು ಹೀರುವುದರಲ್ಲಿ ಮಗ್ನವಾಗಿತ್ತು.
ಮಹಾದೇವಿ ಅದನ್ನು ಗಮನಿಸಿದಳು. ಆದರೆ ಇಂದು ಅದಕ್ಕೆಲ್ಲಾ ಸಿದ್ಧವಾಗಿಯೇ ಬಂದಿದ್ದರಿಂದ ಅದನ್ನು ಎದುರಿಸುತ್ತಾ ಮತ್ತೆ ಮುಂದುವರಿಸಿದಳು: ``ಆದುದರಿಂದ ನನ್ನ ಸೌಂದರ್ಯ ದೈಹಿಕ ಸುಖವನ್ನು ಕೊಡಲಾರದು; ದೈಹಿಕ ಸುಖವನ್ನು ಪಡೆಯಲಾರದು. ಅದನ್ನು ಸ್ಪಷ್ಟವಾಗಿ ಹೇಳುವುದಕ್ಕಾಗಿಯೇ ನಿಮ್ಮ