ಆ ಅಂತಃಪುರದ ಮಹಡಿಯ ಮೇಲೆ ನಿಂತರೆ, ಕೌಶಿಕನ ಸೌಂದರ್ಯೋಪಾಸನೆಗೆ ಉಜ್ವಲವಾದ ಸಾಕ್ಷಿಯೆಂಬಂತಿರುವ ಉದ್ಯಾನವನ ಕಣ್ಣಿಗೆ ಬೀಳುತ್ತಿತ್ತು.
ಸಾರ್ವಜನಿಕ ಉದ್ಯಾನವನ್ನೇ ಅಷ್ಟೊಂದು ಆಸಕ್ತಿಯಿಂದ ಅಲಂಕಾರಗೊಳಿಸುತ್ತಿರುವ ಕೌಶಿಕ, ಅದಕ್ಕೆ ಮಿಗಿಲಾದ ಗಮನವನ್ನು ಈ ತನ್ನ ಉದ್ಯಾನವನಕ್ಕೆ ಕೊಟ್ಟಿರಬೇಕೆಂಬುದರಲ್ಲಿ ಮಹಾದೇವಿಗೆ ಸಂದೇಹವಿರಲಿಲ್ಲ. ಸಹಜವಾಗಿಯೇ ಪ್ರಕೃತಿ ಪ್ರಿಯೆಯಾದ ಆಕೆಗೆ ಈಗ ಉದ್ಯಾನವನದಲ್ಲಿ ತಿರುಗಾಡಿ ಬರಬೇಕೆನ್ನಿಸಿತು. ತನ್ನ ಅಪ್ಪಣೆಗಾಗಿ ದೂರದಲ್ಲಿ ಕಾಯುತ್ತಾ ನಿಂತಿದ್ದ ದಾಸಿಯರಲ್ಲಿ ಒಬ್ಬಳನ್ನು ಹತ್ತಿರಕ್ಕೆ ಕರೆದಳು.
ಆ ದಾಸಿ ಸ್ವಲ್ಪ ಹೆಚ್ಚು ಕಡಮೆ ಮಹಾದೇವಿಯ ವಯಸ್ಸಿನವಳೇ. ಅವಳ ಮುಗ್ಧತೆ ಮಂದಹಾಸಗಳು ಮಹಾದೇವಿಯ ಗಮನವನ್ನು ಸೆಳೆದಿದ್ದುವು. ಬಳಿಗೆ ಬಂದ ಅವಳನ್ನು ಕೇಳಿದಳು ಮಹಾದೇವಿ :
"ನಿನ್ನ ಹೆಸರೇನು ?
"ರಸವಂತಿ. ನಮಸ್ಕರಿಸಿ ವಿನೀತಳಾಗಿ ಹೇಳಿದಳು ದಾಸಿ.
"ರಸವಂತಿ ! ತುಂಬಾ ಸುಂದರವಾದ ಹೆಸರು. ನಿನ್ನ ಸೌಂದರರ್ಯಕ್ಕೆ
ಒಪ್ಪುವಂಥದು. ಮೆಚ್ಚಿ ನುಡಿದಳು ಮಹಾದೇವಿ.
"ತಮ್ಮ ಸೌಂದರ್ಯದ ಮುಂದೆ ನನ್ನದೇನು, ತಾಯಿ ; ಸೂರ್ಯನ ಮುಂದೆ ಮಿಂಚು ಹುಳುವಿನಂತೆ. ಸಂಕೋಚದಿಂದ ಹೇಳಿದಳು ದಾಸಿ. ಮತ್ತೆ ಮುಂದುವರಿಸಿದಳು: ``ನನ್ನ ಮೊದಲನೆಯ ಹೆಸರು `ಕಾಳಿ' ಎಂದಿತ್ತು. ಮಹಾರಾಜರು ಹೊಸ ಹೆಸರನ್ನು ಕೊಟ್ಟರು."
"ಓ ! ರಾಜರು ನಿಮಗೆಲ್ಲಾ ಹೊಸ ಹೆಸರುಗಳನ್ನು ಬೇರೆ ಕೊಡುತ್ತಾರೇನು? ನಗುತ್ತಾ ಕೇಳಿದಳು ಮಹಾದೇವಿ.
"ಅದೇನೂ ಇಲ್ಲ, ತಾಯಿ ; ಆದರೆ... ಅದೇನೋ ನನ್ನ ಹೆಸರು ಒಮ್ಮೆ ಅವರ ಕಿವಿಯ ಮೇಲೆ ಬಿದ್ದಾಗ, ನನ್ನನ್ನು ಹತ್ತಿರಕ್ಕೆ ಕರೆದರು ; ನೋಡಿದರು. ಅನಂತರ ನಗುತ್ತಾ `ಕಾಳಿ, ನಿನಗೆ ಆ ಹೆಸರು ಸರಿಹೋಗುವುದಿಲ್ಲ. ಅದನ್ನು ಬಿಟ್ಟುಬಿಡು. ನಾನೊಂದು ಹೆಸರು ಕೊಡುತ್ತೇನೆ' ಎಂದು ಕ್ಷಣಕಾಲ ಆಲೋಚಿಸಿ, `ರಸವಂತಿ' ಎಂಬ ಹೆಸರು ನಿನಗಿರಲಿ, ಏನು ? ಎಂದರು.' ಆಗಲಿ, ಮಹಾಸ್ವಾಮಿ' ಎಂದು ತಲೆಬಾಗಿದೆ. ಅಂದಿನಿಂದ `ಕಾಳಿ' ಹೋಗಿ ರಸವಂತಿ ಆದೆ ಎಂದು ಮುಗುಳುನಕ್ಕಳು.
ಪುಟ:Kadaliya Karpoora.pdf/೧೦೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೬
ಕದಳಿಯ ಕರ್ಪೂರ