ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಕದಳಿಯ ಕರ್ಪೂರ

ಪ್ರಸಾದದ ನಂತರ ಗುರುಲಿಂಗದೇವರು ಮಂಚದ ಮೇಲೆ ಒರಗಿಕೊಂಡರು. ಶಿಷ್ಯರೂ ಬಂದು ಕುಳಿತರು. ಮಹಾದೇವಿ ತಾಂಬೂಲದ ತಟ್ಟೆಯನ್ನು ತಂದು ಶಿಷ್ಯರ ಮಧ್ಯದಲ್ಲಿಟ್ಟಳು. ಗುರುಗಳು ತಾಂಬೂಲವನ್ನು ಹಾಕಿಕೊಳ್ಳುವುದಿಲ್ಲವೆನ್ನುವುದು ಈಕೆಗೆ ತಿಳಿದಿತ್ತು. ಓಂಕಾರನೂ ಬಂದು ಕುಳಿತುಕೊಳ್ಳುತ್ತಾ ಹೇಳಿದ:

"ಅಂತೂ ಇಂದಿನ ನಮ್ಮ ಭಾಗ್ಯ ಬಹಳ ದೊಡ್ಡದು. ಗುರುಗಳೇ."

"ಅದನ್ನು ತಂದುಕೊಟ್ಟವಳು ನಿಮ್ಮ ಮಹಾದೇವಿ" ಎನ್ನುತ್ತಾ ಗುರುಗಳು ಎದ್ದು ನೆಟ್ಟಗೆ ಕುಳಿತುಕೊಂಡರು ಮತ್ತು ಕೇಳಿದರು:

"ಈ ದಿನ ನಾನಾಗಿಯೇ ಹೇಳಿ ಕಳುಹಿಸಿ ಇಲ್ಲಿಗೆ ಬಂದಿರುವುದೇಕೆಂಬುದನ್ನು ಬಲ್ಲೆಯೇನು, ಓಂಕಾರ?"

ಎಲ್ಲರೂ ನೆಟ್ಟಗೆ ಕುಳಿತರು. ಓಂಕಾರ ಮಾತನಾಡುವುದನ್ನೇ ಮರೆತು ಗುರುಗಳನ್ನು ನೋಡುತ್ತಾ ಮುಂದಿನ ಮಾತುಗಳನ್ನು ನಿರೀಕ್ಷಿಸುತ್ತಿದ್ದ. ಲಿಂಗಮ್ಮನೂ ಬಾಗಿಲ ಹಿಂದೆ ಬಂದು ನಿಂತಳು. ಗುರುಗಳ ವಾಣಿ ಮುಂದುವರಿಯಿತು:

"ಮಲ್ಲಿಕಾರ್ಜುನನ ಸಂಕಲ್ಪದಂತೆ ಅವನ ಪ್ರಸಾದರೂಪವಾದ ಇಷ್ಟಲಿಂಗವನ್ನು ಮಹಾದೇವಿಗೆ ಅನುಗ್ರಹಿಸುವುದಕ್ಕಾಗಿ ನಾನು ಬಂದಿದ್ದೇನೆ. ಇಂದುರಾತ್ರಿ ಮೊದಲನೆ ಪ್ರಹರದ ಅಮೃತಫಳಿಗೆಯಲ್ಲಿ ಆ ದೀಕ್ಷಾಸಂಸ್ಕಾರ ನೆರವೇರಬೇಕಾಗಿದೆ. ಏನು ಓಂಕಾರ? ಲಿಂಗಮ್ಮ, ನಾನು ಹೇಳಿದ ಮಾತು ಕೇಳಿಸಿತೇನಮ್ಮ?"

ನಮ್ಮ ಮಗಳು ಇಷ್ಟೊಂದು ಭಾಗ್ಯಶಾಲಿಯೆಂದು ನಾನು ಭಾವಿಸಿರಲಿಲ್ಲ. ಗುರುದೇವ." ಲಿಂಗಮ್ಮ ಹೇಳಿದಳು ಸ್ವಲ್ಪ ಮುಂದೆ ಬರುತ್ತಾ.

"ನಿಮ್ಮ ಮಗಳಲ್ಲ ಭಾಗ್ಯಶಾಲಿ...." ಎಂದು ಪ್ರಾರಂಭಿಸಿದ ಗುರುಗಳು. ತಾಯ ಪಕ್ಕದಲ್ಲಿಯೇ ಪುಳಕಿತಗಾತ್ರಳಾಗಿ ನಿಂತಿರುವ ಮಹಾದೇವಿಯನ್ನು ಕಂಡು ಅಷ್ಟಕ್ಕೇ ನಿಲ್ಲಿಸಿ "ಆ ಮಾತು ಹಾಗಿರಲಿ.... ಇಂದು ರಾತ್ರಿ ದೀಕ್ಷಾ ಸಂಸ್ಕಾರ ನಡೆಸಬಹುದು ತಾನೆ? ಏನು ಓಂಕಾರ?"

"ನಾನು ಹೇಗೆ ಮಾತನಾಡಲಿ, ಗುರುಗಳೇ! ಮಾತಿಗೂ ಮೀರಿದ ನಿಮ್ಮ ಕರುಣೆಯ ಪ್ರವಾಹದಲ್ಲಿ ಮಿಂದು ನಾವು ಮೌನವಾಗಿದ್ದೇವೆ. ನಮ್ಮ ಮಗಳ ಜನ್ಮ ಸಾರ್ಥಕವಾಯಿತು. ನಾವು ಧನ್ಯರಾದೆವು!"