ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೦
ಕದಳಿಯ ಕರ್ಪೂರ


ಬಂದು, ಅಂತಃಪುರವನ್ನು ಅವರು ಪ್ರವೇಶಿಸಬೇಕಾದ ಬಾಗಿಲಲ್ಲಿ ನಿಂತ ಕೌಶಿಕ. ಮಹಾದೇವಿ ಒಳಗೆ ಬರಲು:

``ಏನು ಮಹಾದೇವಿ, ಉದ್ಯಾನವನ ನಿನ್ನ ಮನಸ್ಸಿಗೆ ಬಂದಿತೆ? ಎಂದು ರಸವಂತಿಯತ್ತ ತಿರುಗಿ,

``ರಸವಂತಿ, ತುಂಬಾ ಬಿಸಿಲಾಗಿಹೋಯಿತಲ್ಲವೆ ? ಸಾಯಂಕಾಲ ಕರೆದುಕೊಂಡು ಹೋಗಿದ್ದರೆ ಆಗುತ್ತಿರಲಿಲ್ಲವೆ ?

``ಇಲ್ಲ ಮಹಾಸ್ವಾಮಿ, ದೇವಿಯವರೇ ...

``ಹೌದು..... ಹೌದು.... ಅವಳು ನನ್ನನ್ನು ಕರೆದುಕೊಂಡು ಹೋಗಲಿಲ್ಲ. ನಾನೇ ಆಕೆಯನ್ನು ಕರೆದುಕೊಂಡು ಹೋದೆ. ತಪ್ಪು ನನ್ನದೇ. ರಸವಂತಿಯ ಪರವಾಗಿ ಹೇಳಿದಳು ಮಹಾದೇವಿ.

``ತಪ್ಪಿನ ಪ್ರಶ್ನೆಯಲ್ಲ ; ಈ ಬಿಸಿಲಲ್ಲಿ ಬಹಳ ಆಯಾಸಪಟ್ಟಿರಬೇಕೆಂದು ಹೇಳಿದೆ, ಅಷ್ಟೆ.

``ಇಲ್ಲ... ಇಲ್ಲ, ಉದ್ಯಾನದ ಸೌಂದರ್ಯವನ್ನು ಸವಿಯುವುದರಲ್ಲಿ ಬಿಸಿಲಿನ ಪರಿವೆಯೇ ನಮಗಾಗಲಿಲ್ಲ. ತುಂಬಾ ಸುಂದರವಾಗಿದೆ, ಉದ್ಯಾನವನ. ನಿಮ್ಮ ಸೌಂದರ್ಯ ದೃಷ್ಟಿ ಮೆಚ್ಚತಕ್ಕದ್ದು.

``ನಿನ್ನ ಮನಸ್ಸಿಗೇ ಬಂದಿತೇ? ಹಾಗಾದರೆ ಸಾರ್ಥಕವಾಯಿತು ಇದನ್ನು ಬೆಳೆಸಿದ್ದು. ರಾಜ ಧನ್ಯನಾದವನಂತೆ ನುಡಿದ. ಮತ್ತೆ ರಸವಂತಿಯನ್ನು ಕುರಿತು ಹೇಳಿದ :

``ರಸವಂತಿ, ಈಗ ದೇವಿಯವರನ್ನು ಕರೆದುಕೊಂಡು ಹೋಗು. ಅವರ ಉಪಚಾರದಲ್ಲಿ ಸ್ವಲ್ಪವೂ ಕೊರತೆಯಾಗಬಾರದು. ತಿಳಿಯಿತಷ್ಟೇ?

ರಸವಂತಿ ಮಾತನಾಡುವುದಕ್ಕೆ ಮುನ್ನ ಮಹಾದೇವಿ ಹೇಳಿದಳು :

``ಯಾವ ಕೊರತೆಯೂ ಆಗಲಾರದು. ಉಪಚಾರ ಅತಿಯಾಗದಿದ್ದರೆ ಸಾಕು. ನಿಮ್ಮ ರಸವಂತಿ ಬಹಳ ರಸಜ್ಞಳು. ತುಂಬಾ ಚೆನ್ನಾಗಿ ಮಾತನಾಡ ಬಲ್ಲವಳು.

ಸಂಕೋಚದಿಂದ ರಸವಂತಿ ಕುಗ್ಗಿ ಬಾಗಿಲ ಮರೆಯನ್ನು ಹೊಕ್ಕಿದ್ದಳು. ಮಹಾದೇವಿ ಮುಂದೆ ನಡೆಯಲು, ಅವಳನ್ನು ಹಿಂಬಾಲಿಸಿ ಮಹಡಿಯನ್ನು ಏರತೊಡಗಿದಳು.

ಮೇಲೇರುತ್ತಿರುವ ಮಹಾದೇವಿಯನ್ನು ಕಣ್ಣು ತುಂಬ ನೋಡಿದ ಕೌಶಿಕ. ಆತನ ಮುಖದ ಮೇಲೆ ತೃಪ್ತಿಯ ಮಂದಹಾಸ ಮಿನುಗಿತು. ಅವಳ ಮಾತುಗಳಿಂದ