ಪುಟ:Kadaliya Karpoora.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೬

ಕದಳಿಯ ಕರ್ಪೂರ

ಮಹಾದೇವಿ ಇದನ್ನೆಲ್ಲಾ ಊಹಿಸಬಲ್ಲವಳಾಗಿದ್ದಳು. ತನ್ನ ತಂದೆ ತಾಯಿಗಳು ಈ ದುಃಖವನ್ನು ಹೇಗೆ ಎದುರಿಸಬಹುದೆಂದು ಊಹಿಸುವಳು. ಅರಮನೆಗೆ ಬಂದ ಮೊದಲು, ತಂದೆತಾಯಿಗಳ ನೆನಪು ಹೆಚ್ಚಾಗಿ ಬರುತ್ತಿತ್ತು. ತನ್ನನ್ನು ಹೆತ್ತು ಹೊತ್ತು ಸಾಕಿ ಸಲಹಿದ ಅವರನ್ನೂ ಹುಟ್ಟಿ ಬೆಳೆದ ಮನೆಯನ್ನೂ ಅಷ್ಟು ಅನಿರೀಕ್ಷಿತವಾಗಿ ಬಿಟ್ಟುಬಂದ ದುಃಖ ಒತ್ತರಿಸಿಬರುತ್ತಿತ್ತು. ಆದರೆ ತನ್ನ ಜೀವನದ ಬೃಹತ್ ಸಮಸ್ಯೆಯನ್ನೆದುರಿಸುವ ಹೋರಾಟದಲ್ಲಿ ಇದನ್ನು ಮರೆಯಬಲ್ಲವಳಾದಳು. ತನ್ನ ಜೀವನವನ್ನು ರೂಪಿಸಿಕೊಳ್ಳುವ ಹೊಣೆಯನ್ನು ತಾನೇ ಹೊತ್ತು ಬಂದುದರಿಂದ ಅವರ ಸಮಸ್ಯೆಗಳನ್ನು ಹೋಗಲಾಡಿಸಿದೆನೆಂಬ ತೃಪ್ತಿಯೊಂದು ಅವಳಲ್ಲಿತ್ತು.

`ಅವರೂ ನನ್ನ ಅಗಲುವಿಕೆಯ ದುಃಖವನ್ನು ಮರೆಯಲಿ' ಎಂದು ಹಾರೈಸುತ್ತಿದ್ದಳು.

ಈಗ ಗುರುಗಳ ಬಳಿಗೆ ಹೋಗುತ್ತಿರುವಾಗ ತಂದೆ-ತಾಯಿಗಳ ನೆನಪು ಸಹಜವಾಗಿಯೇ ಸುಳಿಯಿತು. ಮೇನೆ ತನ್ನ ಮನೆಯ ಮುಂದೆ ಬಂದಾಗ ಅದರ ಬಾಗಿಲ ತೆರೆಯನ್ನು ಓರೆಮಾಡಿ ನೋಡಿದಳು. ಎದೆ ಡವಡವನೆ ಹೊಡೆದುಕೊಳ್ಳುತ್ತಿತ್ತು. ಮನೆಯ ಮುಂದೆಯೇ ಮೇನೆ ಹೋಯಿತು. ಮನೆಯ ಬಾಗಿಲು ಅರ್ಧ ಮುಚ್ಚಿತ್ತು. ಓಂಕಾರನಾಗಲೀ, ಲಿಂಗಮ್ಮನಾಗಲೀ ಕಣ್ಣಿಗೆ ಬೀಳಲಿಲ್ಲ. ಮಹಾದೇವಿಗೆ ಅವರನ್ನು ನೋಡಬಹುದೆಂಬ ಆಸೆ ಒಂದು ಕಡೆ ; ನೋಡಿದರೆ ಇನ್ನೇನೋ ಎಂಬ ದುಗುಡ ಇನ್ನೊಂದು ಕಡೆ; ಅವರಾರೂ ಕಾಣದೇ ಹೋದಾಗ ಅವಳ ಮನಸ್ಸಿಗೆ ಆದುದು ಸಮಾಧಾನವೋ ಸಂಕಟವೋ, ಆಕೆಗೆ ತಿಳಿಯದಂತಾಗಿತ್ತು.

ಮೇನೆ ರಾಜಬೀದಿಯನ್ನು ದಾಟಿತು. ಉದ್ಯಾನವನ್ನು ಹಿಂದಕ್ಕೆ ಹಾಕಿ ಮುಂದೆ ನಡೆಯಿತು. ಮಠದ ಆವರಣವನ್ನು ರಾಜಪರಿವಾರಸಹಿತವಾಗಿ ಪ್ರವೇಶಿಸಿತು ಮೇನೆ. ಮುಂದೆ ಸ್ವಲ್ಪ ದೂರ ಹೋಗುವುದರೊಳಗಾಗಿ ಅಲ್ಲಿಯೇ ನಿಲ್ಲಿಸಬೇಕೆಂದು ಸೂಚನೆಯನ್ನು ಕೊಟ್ಟಳು ಮಹಾದೇವಿ.

ಈ ವೇಳೆಗಾಗಲೇ ಮಠದಲ್ಲಿ ಕೋಲಾಹಲವೆದ್ದಿತ್ತು.

``ರಾಜಪರಿವಾರ ಬಂದಿದೆ ಮಠಕ್ಕೆ ಎಂದು ಯಾರೋ ಓಡಿಹೋಗಿ ಗುರುಲಿಂಗರಿಗೆ ಹೇಳಿದರು. ಗುರುಲಿಂಗರು ಹೊರಗೆ ಬರುತ್ತಿರುವಷ್ಟರಲ್ಲಿ ಮಹಾದೇವಿ ಒಳಗೆ ಬಂದು ನಮಸ್ಕರಿಸಿದಳು.