``ಏಳು ಮಗಳೇ, ಏಳು ಎನ್ನುತ್ತಾ ರಾಜಪರಿವಾರವನ್ನೂ, ಮೇನೆಯನ್ನೂ ನೋಡಿ ಮುಗುಳುನಕ್ಕರು. ಮತ್ತು,
``ಏನಮ್ಮಾ, ಅರಮನೆಯೊಡತಿಯಾಗಿ ಬಂದಿದ್ದೀಯ ! ಕೇಳಿದರು. ಅಷ್ಟರಲ್ಲಿ ರಸವಂತಿಯೂ ಬಂದು ನಮಸ್ಕರಿಸಿದಳು. ಮಹಾದೇವಿ ಅವಳನ್ನು ಪರಿಚಯ ಮಾಡಿಕೊಟ್ಟಳು.
``ಇವಳು ನನ್ನ ಗೆಳತಿ ಗುರುಗಳೇ. ಬಹಳ ಒಳ್ಳೆಯವಳು. ಇವಳದೇ ನನಗೆ ಅವಲಂಬನೆ ಅರಮನೆಯಲ್ಲಿ.
ಗುರುಗಳು ಮೆಚ್ಚುಗೆಯ ದೃಷ್ಟಿಯಿಂದ ಅವಳತ್ತ ನೋಡಿದರು. ವಸಂತಕನನ್ನು ಶಾಲೆಯ ವಿಭಾಗದ ಒಂದು ಕೋಣೆಯಲ್ಲಿ ಕುಳ್ಳಿರಿಸಿ, ಸತ್ಕರಿಸುವಂತೆ ತಮ್ಮ ಶಿಷ್ಯರ ಮೂಲಕ ವ್ಯವಸ್ಥೆ ಮಾಡಿ, ಗುರುಗಳು ಮಹಾದೇವಿಯನ್ನು ಕರೆದುಕೊಂಡು ಒಳಗೆ ನಡೆದರು. ಮಹಾದೇವಿಯ ಸೂಚನೆಯಂತೆ ರಸವಂತಿಯೂ ಹಿಂಬಾಲಿಸಿದಳು.
``ಏನು ಮಹಾದೇವಿ ! ಈ ಮೂರುನಾಲ್ಕು ದಿನಗಳಿಂದ ನಿನ್ನದೇ ಯೋಚನೆಯಾಗಿತ್ತು ನನಗೆ.
``ತಮಗೂ ಯೋಚನೆಯೇ, ಗುರುಗಳೇ.
``ಹೌದಮ್ಮ ! ಸತ್ವಶಕ್ತಿಯ ಆತ್ಮವೊಂದು ಕತ್ತಲೆಯ ತಳಮಳಕ್ಕೆ ಸಿಕ್ಕಾಗ ಯೋಚನೆಗೊಳ್ಳದಿರುವುದಕ್ಕೆ ಆಗುತ್ತದೆಯೇ ? ಹೇಗಿದೆ ಅರಮನೆ?
ಮಹಾದೇವಿ ಎಲ್ಲವನ್ನೂ ಸಂಕ್ಷೇಪವಾಗಿ ಹೇಳಿದಳು. ಕೌಶಿಕನಿಗೆ ತಾನು ಹಾಕಿರುವ ನಿಯಮಗಳನ್ನು ತಿಳಿಸಿದಳು. ಕೊನೆಯಲ್ಲಿ ಹೀಗೆ ಮುಕ್ತಾಯಗೊಳಿಸಿದಳು :
``ಈ ನಾಟಕದಲ್ಲಿಯಂತೂ ಇಳಿದುದಾಯಿತು, ಇದರಿಂದ ಪಾರಾಗುವುದು ಹೇಗೆ, ಗುರುಗಳೇ ?
``ಯೋಚಿಸಬೇಡ, ಯಾವನು ಈ ನಾಟಕಕ್ಕೆ ನಿನ್ನನ್ನು ಇಳಿಸಿದನೋ ಅವನೇ ಅದರ ಮುಂದಿನ ಅಂಕವನ್ನೂ ನಿರ್ಧರಿಸುತ್ತಾನೆ. ಆ ತೆರೆಯೇಳುವರೆಗೂ ಕಾಯಬೇಕು ಅಷ್ಟೆ ಎಂದ ಗುರುಲಿಂಗರು ಸ್ವಲ್ಪ ಅನುಮಾನಿಸಿ :
``ಒಂದು ಮಾತು ಕೇಳುತ್ತೇನೆ. ಅರಮನೆಯ ಜೀವನದಲ್ಲಿ ನೀನು ಬೆರೆತ ಮೇಲೂ ಮದುವೆಯಾಗಬಾರದೆಂಬ ನಿನ್ನ ಮೊದಲಿನ ನಿಷ್ಠೆ ಹಾಗೆಯೇ ಇದೆಯೇ.... ಅಥವಾ.... ಎಂದು ಕೇಳಿದರು.