``ಕ್ಷಮಿಸಬೇಕು, ಗುರುಗಳೇ... ನಿಮಗೂ ಅನುಮಾನವೇ? ಇನ್ನೊಂದು ವಿಧವಾಗಿ ನಾನು ಆಲೋಚಿಸುವುದಕ್ಕೂ ಅಸಮರ್ಥಳು. ಒಮ್ಮೆ ನನ್ನ ಮನಸ್ಸು ಅಳುಕಿದುದು ನಿಜ. ಆದರೆ ಅದರಿಂದ ನನ್ನ ಆದರ್ಶ ಇನ್ನೂ ಹೆಚ್ಚಾಗಿ ಹೊಳಪನ್ನು ಪಡೆದಿದೆ. ಈಗಂತೂ ಅದರಿಂದ ಹಿಂದೆ ಸರಿಯುವುದು ಸಾಧ್ಯವೇ ಇಲ್ಲದಂತಾಗಿದೆ.
``ನಿಜ, ನಿನ್ನ ನಿಷ್ಠೆಯನ್ನು ನಾನು ಬಲ್ಲೆ. ತೃಪ್ತಿಯಿಂದ ಹೇಳಿದರು ಗುರುಗಳು:
``ಆದರೂ ಹೀಗೆ ಕೇಳಿದೆನೆಂದು ನೊಂದುಕೊಳ್ಳಬೇಡ. ಸಾಮಾನ್ಯ ಚೇತನಗಳ ಊಹೆಗೂ ಮಿಗಿಲಾದ ಆದರ್ಶವಿದಾದುದರಿಂದ ಅದನ್ನು ಕೇಳಿದೆ. ಅಂತಹ ನಿಷ್ಠೆ ನಿನ್ನಲ್ಲಿದ್ದರೆ ಸಾಮಾನ್ಯ ಮಾನವನ ಕಲ್ಪನೆಗೂ ನಿಲುಕದ ಮಾರ್ಗವನ್ನು ನಿನ್ನ ಸಾಧನೆ ಕಂಡುಕೊಳ್ಳುತ್ತದೆ.
ಗುರುಗಳು ಮಾತನ್ನು ಮುಗಿಸುವಷ್ಟರಲ್ಲಿ ಓಂಕಾರಶೆಟ್ಟಿ - ಲಿಂಗಮ್ಮ ಬಂದರು. ಮಹಾದೇವಿಯ ಮೇನೆ ಮಠದ ಕಡೆ ಹೋಯಿತೆಂಬುದನ್ನು ಕೇಳಿದೊಡನೆಯೇ ಇತ್ತ ಓಡಿಬಂದಿದ್ದರು.
ಮಗಳನ್ನು ಕಂಡೊಡನೆಯೇ ಲಿಂಗಮ್ಮನ ದುಃಖ ಉಕ್ಕಿಬಂದಿತು. ``ಮಗಳೇ ಎನ್ನುತ್ತಾ ಓಡಿಹೋಗಿ, ಏಳುತ್ತಿರುವ ಮಹಾದೇವಿಯನ್ನು ತಬ್ಬಿಕೊಂಡಳು. ಓಂಕಾರನೂ ಬಳಿಗೆ ಹೋಗಿ ನಿಂತ. ಮಹಾದೇವಿ ತಂದೆಗೆ ನಮಸ್ಕರಿಸಿದಳು. ಅವಳ ತಲೆಯನ್ನು ನೇವರಿಸುತ್ತಾ ಓಂಕಾರ :
``ಕುಳಿತುಕೋ ಮಗಳೇ ಎಂದ, ತನ್ನ ದುಃಖವನ್ನು ತಡೆದುಕೊಂಡು. ಲಿಂಗಮ್ಮ ತನ್ನ ಉದ್ವೇಗ ಸ್ವಲ್ಪ ಕಡಿಮೆಯಾದ ಮೇಲೆ ಮಗಳನ್ನೇ ದಿಟ್ಟಿಸಿ ನೋಡಿದಳು. ಮಹಾದೇವಿ ಎದಿನಂತೆಯೇ ಇದ್ದಳು. ಅರಮನೆಯ ವಿಲಾಸ ಜೀವನದ ಲಕ್ಷಣಗಳು ಕಾಣಲಿಲ್ಲ. ಅದೇ ಉಡುಗೆ, ಅದೇ ತೊಡಿಗೆ, ಅದೇ ಸರಳತೆ. ಆದರೂ ಏನೋ ಹೇಳಲಾಗದ ಒಂದು ಬದಲಾವಣೆ ಆದಂತಿತ್ತು. ದುಃಖದ ಅನುಭವದಿಂದ ಪರಿಪಾಕಗೊಂಡ ಮುಖಭಾವ ಕಾಣುತ್ತಿತ್ತು.
``ಏನು ಲಿಂಗಮ್ಮ ! ಮಗಳನ್ನು ಹೊಸದಾಗಿ ಕಾಣುವವಳಂತೆ ದಿಟ್ಟಿಸಿ ನೋಡುತ್ತಿದ್ದೀಯ? ನಗುತ್ತಾ ಕೇಳಿದರು ಗುರುಗಳು.
``ನಿಜ, ಗುರುಗಳೇ ! ಹೊಸದಾಗಿ ಮಗಳನ್ನು ಕಂಡಂತೆ ನನಗೆ ಅನಿಸುತ್ತಿದೆ. ಮಹಾದೇವಿ, ಇನ್ನು ಆ ಅರಮನೆಯ ಸಹವಾಸ ಸಾಕು. ಮತ್ತೆ ಆ ಅರಮನೆಗೆ ಹೋಗಬೇಡ.
ಮಹಾದೇವಿ ಗುರುಗಳ ಕಡೆ ನೋಡಿದಳು. ಗುರುಗಳು ಕೇಳಿದರು :