ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೧೧

ಗುರುಗಳು ಸಂತೃಪ್ತರಾಗಿ ಹೇಳಿದರು:

"ಸರಿ ಹಾಗಾದರೆ" ಎಂದು ಲಿಂಗಮ್ಮನನ್ನು ಕುರಿತು "ಅದಕ್ಕಾಗಿ ಅತಿ ಹೆಚ್ಚಿನ ಸಿದ್ಧತೆಯೇನೂ ಬೇಡ, ತಾಯಿ. ನಿಮ್ಮೆಲ್ಲರ ಮನಸ್ಸಿನ ಪರಿಶುದ್ಧತೆಗಿಂತ ಹೆಚ್ಚಿನ ಸಿದ್ಧತೆ ಯಾವುದಿದೆ....? ಹೋಗು ಮಹಾದೇವಿ, ಪ್ರಸಾದವನ್ನು ಸ್ವೀಕರಿಸಿ ಬಾ. ಆನಂತರ ಶ್ರೀಶೈಲದ ಕಥೆ ಹೇಳುತ್ತೇನೆ."

ಮಹಾದೇವಿ, ಲಿಂಗಮ್ಮ ಅಡುಗೆ ಮನೆಗೆ ಹೋದರು. ಸ್ವಲ್ಪ ಕಾಲ ಮೌನ ಆವರಿಸಿತು. ಗುರುಗಳ ಮಾತನ್ನೇ ಎಲ್ಲರೂ ಮೆಲುಕು ಹಾಕುತ್ತಿರುವಂತೆ ತೋರುತ್ತಿತ್ತು. ಗುರುಪಾದಪ್ಪನೇ ಮೌನವನ್ನು ಮುರಿದ:

"ಶ್ರೀಶೈಲ ಇಲ್ಲಿಗೆ ಬಹಳ ದೂರ ಅಲ್ಲವೇ, ಗುರುಗಳೇ?"

"ಹೌದು ಬಹಳ ದೂರ ಇಲ್ಲಿಗೆ. ಕನ್ನಡನಾಡನ್ನು ದಾಟಿ ಆಚೆ ಹೋಗಬೇಕು, ಬಹಳ ದೂರ.... ಬಹಳ ದೂರ...." ತಾವು ಹೋಗಿ ಬಂದ ದೂರದ ಕಲ್ಪನೆಯನ್ನು ಮಾಡಿಕೊಳ್ಳುತ್ತಾ ಹೇಳಿದರು ಗುರುಗಳು.

"ಬಹು ದೊಡ್ಡ ಯಾತ್ರೆಯನ್ನು ಕೈಕೊಂಡು ಅದನ್ನು ಯಶಸ್ವಿಯಾಗಿ ನಿರ್ವಹಿಸಿದಿರಿ, ಗುರುದೇವಾ" ಓಂಕಾರ ಮೆಚ್ಚಿ ನುಡಿದ.

"ಮಲ್ಲಿಕಾರ್ಜುನನ ಸಂಕಲ್ಪ, ಎಲ್ಲಾ ನಡೆಯಿತು. ನಮಗೇನೂ ಅಷ್ಟು ಕಷ್ಟವಾಗಲಿಲ್ಲ ಪ್ರಯಾಣ. ಸೊನ್ನಲಿಗೆ ಪ್ರಾಂತದಿಂದ ಬಂದ ಶ್ರೀಶೈಲ ಯಾತ್ರೆಯ ಪರಿಷೆ ಸಿಕ್ಕ ಮೇಲಂತೂ ನಮ್ಮ ಪ್ರಯಾಣ ಇನ್ನೂ ಸುಗಮವಾಯಿತು."

"ಸೊನ್ನಲಿಗೆಯಿಂದ ಪರಿಷೆ?" ಓಂಕಾರ ಕೇಳಿದ.

"ಹೌದು. ಪ್ರತಿವರ್ಷವೂ ಆ ಭಾಗದಿಂದಶ್ರೀಶೈಲದವರೆಗೆ ಒಂದು ದೊಡ್ಡ ಗುಂಪೇ ಹೊರಡುತ್ತದಂತೆ. ಸೊನ್ನಲಿಗೆಯ ಸಿದ್ಧರಾಮ, ಶ್ರೀಶೈಲಕ್ಕೆ ಹೋಗಿ ಬಂದಮೇಲಂತೂ ಶ್ರೀಶೈಲ ಸೋನ್ನಲಿಗೆಗೆ ಬಹಳ ಹತ್ತಿರವಾಗಿದೆ. ನಮಗೆ ಸಿಕ್ಕಿದ ಆ ಪರಿಷೆಯಲ್ಲಿ ಒಳ್ಳೇ ಸಾಧಕರು ಕೆಲವರಿದ್ದರು. ಅನೇಕರು ಭಾವುಕ ಭಕ್ತರು. ನಮ್ಮನ್ನಂತೂ ಬಹಳ ಆದರದಿಂದ ನೋಡಿಕೊಂಡರು" ಎಂದು ಪ್ರಾರಂಭಿಸಿ ಮಾರ್ಗದಲ್ಲಿ ಉಂಟಾದ ಅನುಭವಗಳನ್ನು ಹೇಳತೊಡಗಿದರು. ಆಂಧ್ರದ ಅತಿ ತೀವ್ರವಾದ ಬಿಸಿಲಿನ ತಾಪವನ್ನು ವರ್ಣಿಸಿದರು. ಹೀಗೆ ಅದು ಇದು ಮಾತು ನಡೆಯುತ್ತಿರುವಷ್ಟರಲ್ಲಿ ಮಹಾದೇವಿ ಬಂದಳು. ಮೊದಲಿನಂತೆ ಗುರುಗಳಿಗೆ ಸಮೀಪದಲ್ಲಿ ಮಂಚದ ಕೆಳಗೆ ಕುಳಿತಳು. ಲಿಂಗಮ್ಮನೂ ಬಂದು ಸಮೀಪದಲ್ಲಿ ಕುಳಿತುಕೊಂಡುದು ಕಾಣಿಸಿತು ಗುರುಗಳಿಗೆ.