ಮಹಾದೇವಿಗೆ ಅರ್ಥವಾಯಿತು. ಹೇಳಿದಳು :
``ಅದರ ಯೋಚನೆಯಿಲ್ಲ. ನನಗೆ ಸಂಪೂರ್ಣವಾಗಿ ಪೂಜಾಸ್ವಾತಂತ್ರ್ಯವಿದೆ. ನನ್ನ ಸಾಧನೆಗೆ ರಾಜರು ಅಡ್ಡಿ ಬರುವುದಿಲ್ಲ.
``ಹಾಗಾದರೆ ಆಗಬಹುದು ಗುರುಲಿಂಗರು ಸಮ್ಮತಿಸಿದರು.
ಮಹಾದೇವಿ ಎದ್ದು ಜಂಗಮರಿಗೆ ನಮಸ್ಕರಿಸಿ : ``ಇದೇ ನನ್ನ ಬಿನ್ನಹ.
``ಆಗಬಹುದು, ನಾಳೆ ನಾವೇ ಬರುತ್ತೇವೆ. ಮಧ್ಯಾಹ್ನದ ವೇಳೆಗೆ.
ಮಹಾದೇವಿಯ ಮುಖ ತೃಪ್ತಿಯಿಂದ ಮಿನುಗಿತು. ರಸವಂತಿ ಹೊತ್ತಾಯಿತೆಂಬ ಸೂಚನೆಯನ್ನು ಕೊಟ್ಟಳು. ಮಹಾದೇವಿ ಗುರುಗಳ ಅಪ್ಪಣೆಯನ್ನು ಪಡೆದು ಹೊರಡಲು ಸಿದ್ಧಳಾದಳು. ರಸವಂತಿಯೂ ಮಹಾದೇವಿಯನ್ನು ಅನುಸರಿಸಿದಳು. ಗುರುಲಿಂಗರಿಗೆ ಆಕೆ ನಮಸ್ಕಾರ ಮಾಡಿ ಮೇಲೇಳುವಾಗ ಅವರು ಕೇಳಿದರು :
``ನಿನ್ನ ಹೆಸರೇನು ತಂಗಿ ?
``ರಸವಂತಿ.'
'
``ನಮ್ಮ ಮಹಾದೇವಿಯನ್ನು ಚೆನ್ನಾಗಿ ನೋಡಿಕೊಳ್ಳಮ್ಮ. ಅವಳ ಮನಸ್ಸನ್ನು ನೀನಾಗಲೇ ತಿಳಿದುಕೊಂಡಿರಬಹುದು. ಅವಳಿಗೆ ಸಹಾಯಕಳಾಗು.
``ಅವರ ಪಾದಧೂಳಿಯ ಯೋಗ್ಯತೆಯೂ ನನಗಿಲ್ಲ, ಗುರುಗಳೇ. ಏನೋ ಅವರ ಸೇವೆ ಮಾಡುವ ಭಾಗ್ಯ, ಅದಾವ ಪುಣ್ಯದಿಂದಲೋ ನನ್ನ ಪಾಲಿಗೆ ಬಂದಿದೆ. ಅದನ್ನು ಪವಿತ್ರ ಪೂಜೆಯೆಂದು ನಾನು ಮಾಡುತ್ತೇನೆ.
ಆ ದಾಸಿಯ ಸುಸಂಸ್ಕೃತ ಹೃದಯದಿಂದ ಬಂದ ಮಾತುಗಳು ಎಲ್ಲರನ್ನೂ ಸೆರೆಹಿಡಿದವು.
ಮಹಾದೇವಿ ಮೇನೆಯನ್ನೇರಿ ಕುಳಿತಳು. ರಸವಂತಿ ಅವಳನ್ನು ಹಿಂಬಾಲಿಸಿದಳು. ವಸಂತಕನಾಗಲೇ ಸಿದ್ಧನಾಗಿದ್ದ. ರಾಜಪರಿವಾರ ಮೇನೆಯೊಡನೆ ಹೊರಟಿತು. ಮಠದಲ್ಲಿ ನಿಂತ ಎಲ್ಲರೂ ಮೇನೆ ಮರೆಯಾಗುವವರೆಗೂ ಅದನ್ನೇ ನೋಡುತ್ತಿದ್ದರು.
ಅನಂತರ ಗುರುಲಿಂಗರು ಓಂಕಾರ ಲಿಂಗಮ್ಮರನ್ನು ಸಂತೈಸಿದರು. ಧೈರ್ಯವನ್ನಿತ್ತು ಮನೆಯ ಕಡೆಗೆ ಅವರನ್ನು ಕಳುಹಿಸಿದರು. ನಾಳೆ ಅರಮನೆಗೆ ಹೋಗುವ ವಿಷಯದ ವಿವರಗಳನ್ನು ಕೊಡುತ್ತಾ ಜಂಗಮರನ್ನು ಒಡಗೊಂಡು ಮಠದ ಒಳಗೆ ನಡೆದರು.
ಪುಟ:Kadaliya Karpoora.pdf/೧೨೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೧೨೧