9
ಇತ್ತ ಮೇನೆಯಲ್ಲಿ ಅರಮನೆಯತ್ತ ತೆರಳುತ್ತಿದ್ದ ಮಹಾದೇವಿಯ ಮನಸ್ಸು ಒಂದು ಬಗೆಯ ತೃಪ್ತಿಯಿಂದ ಕೂಡಿತ್ತು.
ಉದಾತ್ತವಾದ ಸಾಧನೆಗಾಗಿ ಎಷ್ಟೋ ವೇಳೆ ಕ್ಷುದ್ರವಾದ ನಿಂದೆಯನ್ನು ನಾವು ಸಹಿಸಿಕೊಳ್ಳಬೇಕಾಗುತ್ತದೆ.'
ಎಂಬ ಗುರುಗಳ ಮಾತನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಿದ್ದಳು. ತನ್ನನ್ನು ಕುರಿತು ಜನ
ಆಡಿಕೊಳ್ಳಬಹುದಾದ ಮಾತುಗಳಿಗೆಲ್ಲಾ ಅದು ಸಂಜೀವಿನಿಯೆಂದು ಭಾವಿಸಿದಳು.
ಹಾಗೆಯೇ ಕಲ್ಯಾಣದಿಂದ ಬಂದ ಜಂಗಮರತ್ತ ಅವಳ ಮನಸ್ಸು ಸುಳಿಯಿತು. ಅವರು ಅರಮನೆಗೆ ಬರಲು ಒಪ್ಪಿದುದಕ್ಕಾಗಿ ಆಕೆಗೆ ತುಂಬಾ ಸಂತೋಷವಾಯಿತು. ಕಲ್ಯಾಣದ ವಾರ್ತೆಯನ್ನು ಅವರಿಂದಲೇ ಕೇಳಿ ತಿಳಿಯಬೇಕೆಂಬ ಕುತೂಹಲ ಉಕ್ಕಿಬರುತ್ತಿತ್ತು.
ರಸವಂತಿಯತ್ತ ನೋಡಿದಳು. ಅವಳು ಆವುದೋ ಆಲೋಚನೆಯಲ್ಲಿ ಮಗ್ನವಾಗಿರುವಂತೆ ತೋರುತ್ತಿತ್ತು.
"ಏನು ರಸವಂತಿ, ಬಹಳ ಗಹನವಾದ ಆಲೋಚನೆಯಲ್ಲಿ ತೊಡಗಿರುವಂತೆ ತೋರುತ್ತಿದೆ? ಕೇಳಿದಳು.
"ಇಲ್ಲ ತಾಯಿ, ಏನೂ ಇಲ್ಲ ಎಚ್ಚೆತ್ತವಳಂತೆ ರಸವಂತಿ ಸಾವರಿಸಿಕೊಂಡು ಕುಳಿತಳು.
"ಮತ್ತೇನು ? ಕಣ್ಣು ಮುಚ್ಚಿ ಧ್ಯಾನಾಸಕ್ತಳಾದಂತೆ ಕುಳಿತಿದ್ದೀಯ ?"
"ಈ ದಿನ ನಾನು ಎಷ್ಟೊಂದು ವಿಷಯಗಳನ್ನು ಕಲಿತೆ, ತಾಯಿ. ಹೆಣ್ಣು ಇರುವುದೇ ಭೋಗಕ್ಕಾಗಿ ಎಂದು ನಂಬಿದ ನನಗೆ, ಒಂದು ಹೊಸ ದೃಷ್ಟಿ ಬಂದಂತಾಯಿತು. ನಮಗೂ ಪುರುಷರಂತೆ ವ್ಯಕ್ತಿತ್ವವಿದೆಯೆಂಬುದನ್ನು ನೀವು ತೋರಿಸಿಕೊಟ್ಟಿರಿ.
"ನಿಜ, ಸ್ತ್ರೀಗೂ ವ್ಯಕ್ತಿತ್ವವಿದೆ. ಆದರೆ ಇಂದು ಸ್ತ್ರೀ ತನ್ನ ಆತ್ಮವನ್ನೇ ಭೋಗಕ್ಕೆ ಮಾರಿಕೊಂಡಿದ್ದಾಳೆ ; ವಿಲಾಸಿನಿಯಾಗಿದ್ದಾಳೆ. ಕಾಮನಾಟದ ಬೊಂಬೆಯಾಗಿದ್ದಾಳೆ. ತೃಪ್ತಿಯನ್ನು ಕಂಡುಕೊಂಡಿದ್ದಾಳೆ. ಹೆಣ್ಣಿನ ಬಾಳೇ ಅದಕ್ಕಾಗಿ ಎಂದು ನಂಬಿಕೊಂಡಿದ್ದಾಳೆ. ಈ ಭಾವನೆಯನ್ನು ಅವಳು ಬಿಡದ ಹೊರತು ಅವಳ ಉದ್ಧಾರವಿಲ್ಲವೆಂದೇ ಅನಿಸುತ್ತದೆ, ರಸವಂತಿ. ತಾನು ವಿಲಾಸಿನಿಯಲ್ಲ, ತಪಸ್ವಿನಿಯೆಂಬುದನ್ನು ಕಂಡುಕೊಳ್ಳಬೇಕಾಗಿದೆ ಹೆಣ್ಣು."