ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೧೨೩


ಅದನ್ನು ಮೆಚ್ಚಿ ನುಡಿಯುವುದಕ್ಕೂ ಮೀರಿದ ಭಾವ ತುಂಬಿಬಂದಿತು ರಸವಂತಿಯಲ್ಲಿ. ಮಾತು ಗೌರವದಿಂದ ಮೂಕವಾಯಿತು. ಮಹಾದೇವಿಯ ಎದುರು ತಲೆಬಾಗಿದಳು.
ಅರಮನೆ ಬಂದಿತು. ಮಹಾದೇವಿ - ರಸವಂತಿಯರು ಅಂತಃಪುರವನ್ನು ಪ್ರವೇಶಿಸಿದರು. ಮಹಾದೇವಿ ಮಹಡಿಯನ್ನು ಹತ್ತದೆ, ಉದ್ಯಾನವನಕ್ಕೆ ಹೋಗುವ ಬಾಗಿಲತ್ತ ನಡೆದಳು.
"ರಸವಂತಿ, ನಾನಿಲ್ಲೇ ಲತಾನಿಕುಂಜದಲ್ಲಿರುತ್ತೇನೆ. ನೀನು ಸ್ವಲ್ಪ ಹೊತ್ತು ಬಿಟ್ಟು ಸ್ನಾನಕ್ಕೆ ಪೂಜೆಗೆ ಸಿದ್ಧಪಡಿಸಿ ಬಂದು ಕರೆಯುತ್ತೀಯ ?"
"ಆಗಲಿ, ತಾಯಿ...." ಎಂದು ರಸವಂತಿ ನಡೆದಳು.
{{gap}ಮಹಾದೇವಿ ಉದ್ಯಾನದ ಲತಾಕಂಜವನ್ನು ಪ್ರವೇಶಿಸಿದಳು. ಸೂರ್ಯನಾಗಲೇ ಪಡುವಣ ದಿಗಂತದ ಕೊನೆಯ ಅಂಚಿನಲ್ಲಿ ನಿಂತು ಮರೆಯಾಗಲು ಹವಣಿಸುತ್ತಿದ್ದ. ಸಂಧ್ಯಾಸಮೀರಣ, ಮಂದಮಂದವಾಗಿ ಬೀಸುತ್ತಾ, ಹೊಂಬೆಳಕಿನಲ್ಲಿ ಮಿಂದುನಿಂತು ಪುಷ್ಪವತಿಯಾದ ಲತಾಸುಂದರಿಯನ್ನು ತಬ್ಬಿ ತಣಿಸುತ್ತಿದ್ದ. ನಾನಾವರ್ಣದ ಪುಷ್ಪಸಂಕುಲಗಳು ಸಂತೋಷದಿಂದ ಲಾಸ್ಯವಾಡುತ್ತಿದ್ದವು. ಸರೋವರದ ಸಾರಸಪಕ್ಷಿಗಳ ಮಧುರಕೂಜನ, ಇತರ ಹಕ್ಕಿಗಳ ಕಲರವದೊಡನೆ ಸೇರಿ ನಾದಪ್ರವಾಹದ ಗಂಧರ್ವ ಲೋಕವನ್ನು ಸೃಜಿಸಿತ್ತು.
ಮಹಾದೇವಿ ಲತಾನಿಕುಂಜದ ಪೀಠದ ಮೇಲೆ ಕುಳಿತಳು ಪಡುವಣ ದಿಗಂತಕ್ಕೆದುರಾಗಿ. ಆಕೆ ಗುರುಲಿಂಗರ ಬಳಿಯಿಂದ ಬಂದಳೆಂಬುದನ್ನು ತಿಳಿದು ಅದೇ ದಾರಿಯನ್ನು ಕಾಯುತ್ತಿದ್ದ ಕೌಶಿಕ, ಈ ವೇಳೆಗೆ ಅಲ್ಲಿಗೆ ಬಂದ. ಅತಿಮೋಹಕವಾದ ಭಂಗಿಯಲ್ಲಿ ಕುಳಿತಿದ್ದ ಮಹಾದೇವಿ ಕಣ್ಣಿಗೆ ಬಿದ್ದಳು.
ಶಿಲಾಪೀಠದ ಮೇಲೆ ವಿಶ್ರಾಂತಿಗೆಂಬಂತೆ ಹಾಗೇ ಹಿಂದಕ್ಕೆ ಒರಗಿ ಮುಳುಗುವ ಸೂರ್ಯನತ್ತ ದೃಷ್ಟಿಯನ್ನು ಹರಿಸುವಂತೆ ಕಾಣುತ್ತಿತ್ತು. ಆತನ ಕೊನೆಯ ಹೊಂಗಿರಣಗಳು ಮಹಾದೇವಿಯ ಮುಖವನ್ನು ಮುತ್ತಿಡುತ್ತಿದ್ದುವು. ಹಾರಾಡುತ್ತಿರುವ ಮುಂಗುರುಳುಗಳೊಡನೆ ಲಾಸ್ಯವಾಡುತ್ತಿದ್ದುವು. ಅವುಗಳ ಸೌಭಾಗ್ಯಕ್ಕಾಗಿ ಕರುಬುತ್ತಾ ಕೌಶಿಕ ಸದ್ದಾಗದಂತೆ ನಡೆದುಬಂದ. ಸಡಿಲವಾಗಿ ಹೆರಳನ್ನು ಹಾಕಿದ ನೀಳವಾದ ಅವಳ ಕೇಶರಾಶಿಗಳು ಒಂದು ಪಕ್ಕಕ್ಕೆ ಓರೆಯಾಗಿ ಎದೆಯ ಮೇಲಿಂದ ಇಳಿದು ನೆಲವನ್ನು ಮುಟ್ಟುವಂತೆ ಹಬ್ಬಿ ಹರಡಿದ್ದುವು.