ಹತ್ತಿರ ಹತ್ತಿರ ಬಂದಂತೆಲ್ಲಾ ಅವಳ ಆಕಾರ, ಆತನಲ್ಲಿ ಉನ್ಮಾದವನ್ನುಂಟು ಮಾಡುವಂತಿತ್ತು. ಆವುದೋ ಆಲೋಚನೆಯಿಂದಲೆಂಬಂತೆ ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡಿದ್ದಾಳೆ. ಆ ತಪ್ತಕಾಂಚನ ವರ್ಣದ ಅವಳ ಸುಂದರವಾದ ಮುಖ, ಇನಿಯನ ಬರವನ್ನು ಹಾರೈಸಿ ಮುಗಿದ ಕಮಲದ ಆಹ್ವಾನದಂತೆ ಕಾಣುತ್ತಿದೆ ಕೌಶಿಕನಿಗೆ !
ಒಂದು ಕೈಯನ್ನು ಮೇಲಕ್ಕೆತ್ತಿ ಕಲ್ಲಿನ ಪೀಠದ ಮೇಲೆ, ತಲೆಯ ಹಿಂದೆ ದಿಂಬಿನಂತೆ ಇಟ್ಟುಕೊಂಡಿದ್ದಾಳೆ. ಇನ್ನೊಂದು ಕೈ ಏರಿಳಿತವನ್ನು ಸೂಚಿಸುತ್ತಿರುವ ಅವಳ ಎದೆಯ ಮೇಲೆ ಮಲಗಿದೆ. ಸೆರಗು ನಸು ಜಾರಿದೆ.
ಮಲ್ಲಿಗೆಯ ದಂಡೆಯಂತಹ ಅವಳ ದುಂಡುತೋಳಿನ ಕಾಂತಿ, ಕೌಶಿಕನನ್ನು ಕರೆದಂತೆ ಕಾಣಿಸಿತು. ಅವಳ ಅಂಗಾಂಗಗಳಲ್ಲೆಲ್ಲಾ ಅವನ ಹಸಿದ ದೃಷ್ಟಿ ಹರಿದಾಡಿತು. ನೋಡಿದಂತೆಲ್ಲಾ ಅವನ ಮನಸ್ಸು ಹುಚ್ಚೆದ್ದು ಕುಣಿಯಿತು. ದಳ್ಳುರಿಯಂತೆ ದೇಹದ ಕಣಕಣವನ್ನು ವ್ಯಾಪಿಸಿತು. ವಿವೇಕದ ಹಗ್ಗ ಹರಿಯಿತು, ಸಂಯಮದ ಕಟ್ಟೆ ಒಡೆಯಿತು. ಏನು ಮಾಡುತ್ತಿರುವೆನೆಂಬುದರ ಪ್ರಜ್ಞೆಯೇ ಹಾರಿತು. ಆವೇಶ ಬಂದವನಂತೆ ಮುಂದೆ ನುಗ್ಗಿದವನೇ ``ಮಹಾದೇವಿ ಎನ್ನುತ್ತಾ ಅವಳನ್ನು ತಬ್ಬಿದ.
ಸಿಡಿಲು ಹೊಡೆದವಳಂತೆ ಸಿಡಿದು ನಿಂತಳು ಮಹಾದೇವಿ. ಸಾತ್ವಿಕವಾದ ಕಾಂತಿಯಿಂದ ಪ್ರಶಾಂತವಾಗಿದ್ದ ಮುಖ, ಭಯಂಕರವಾಗಿ ಅಗ್ನಿಪರ್ವತದಂತೆ ಕಿಡಿಗಳನ್ನುಗುಳತೊಡಗಿತ್ತು :
"ಮಹಾರಾಜ ಹಿಂದಕ್ಕೆ ಸರಿದು ನಿಲ್ಲು. ವಿನಾಶದ ಹಾದಿಯನ್ನು ತುಳಿಯಬೇಡ !" ಕೋಪದಿಂದ ತುಟಿಗಳು ಕಂಪಿಸುತ್ತಿದ್ದವು. ದೇಹವೆಲ್ಲಾ ಆವೇಶದಿಂದ ನಡುಗುತ್ತಿತ್ತು.
ಬೆಂಕಿಯ ಮೇಲೆ ಬಿದ್ದು ಮೈಸುಟ್ಟುಕೊಂಡ ನರಿಯಂತೆ ತಡವರಿಸುತ್ತಾ ಹೇಳಿದ ಕೌಶಿಕ :
ಇಲ್ಲ.... ಮಹಾದೇವಿ... ನಾನೇನೂ ಅಂತಹ....
"ನಿಲ್ಲಿಸು, ಪರಸ್ತ್ರೀಯೊಬ್ಬಳು ಮೈಮರೆತು ಕುಳಿತಿರುವಾಗ, ಹಿಂದಿನಿಂದ ಬಂದು ಮೈ ಮುಟ್ಟುವುದಕ್ಕೆ ನಾಚಿಕೆಯಾಗುವುದಿಲ್ಲವೇ ನಿನಗೆ ?" ಗುಡುಗಿದಳು ಮಹಾದೇವಿ.
"ನೀನು ಪರಸ್ತ್ರೀಯೆಂದು ನಾನು ಭಾವಿಸಿಲ್ಲ." ತೊದಲಿದ ಕೌಶಿಕ.