``ಕ್ಷಮಿಸು, ರಾಜೇಂದ್ರ. ಅಂತಹ ನಿನ್ನ ಪ್ರೇಮವನ್ನು ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಅದಕ್ಕೆ ಅನರ್ಹಳೆಂದಾದರೂ ನನ್ನನ್ನು ಬಿಟ್ಟುಬಿಡು. ಈಗಲೂ ಹೇಳುತ್ತೇನೆ, ಆಡಿದ ಮಾತಿಗೆ ತಪ್ಪಿ ದುಡುಕಿ ನಡೆಯಬೇಡ. ನನ್ನನ್ನು ಕಳುಹಿಸಿಬಿಡು. ಇಲ್ಲವಾದರೆ...
ಹೇಳುತ್ತಾ ಹೇಳುತ್ತಾ ಮಹಾದೇವಿಯ ಧ್ವನಿ ಮತ್ತೆ ಗಡುಸಾಯಿತು :
``ಇಲ್ಲವಾದರೆ... ಮನುಷ್ಯನ ಯೋಗ್ಯತೆಯನ್ನು ಮೂರು ಬಾರಿ ಪರೀಕ್ಷಿಸಿ ನಿರ್ಧರಿಸಬೇಕೆಂಬ ಮಾತುಂಟು. ಈಗ ನೀನು ನನ್ನ ನಿಯಮವನ್ನು ಮೀರಿ, ಕೊಟ್ಟ ಮಾತಿಗೆ ತಪ್ಪಿದ್ದೀಯ. ಇನ್ನು ಎರಡು ಬಾರಿ ನಿನ್ನಿಂದ ಇಂತಹ ತಪ್ಪುಗಳು ಘಟಿಸಿದರೆ, ನಾನು ಸ್ವತಂತ್ರಳಾಗುತ್ತೇನೆ. ಆಗ ನನ್ನನ್ನು ಯಾವ ಶಕ್ತಿಯೂ ಈ ಅರಮನೆಯಲ್ಲಿ ತಡೆದು ನಿಲ್ಲಿಸಲಾರದು ತಿಳಿಯಿತೇ ?
``ಹಾಗೆಲ್ಲ ಹೇಳಬೇಡ ಮಹಾದೇವಿ. ನೀನಿಲ್ಲದೆ ನನ್ನ ಬಾಳು ನಡೆಯಲಾರದು. ನನ್ನನ್ನು ಉದ್ಧರಿಸುವುದು ನಿನಗೆ ಸೇರಿದೆ.
``ಆಡಿದ ಮಾತನ್ನೇ ಮತ್ತೆ ಮತ್ತೆ ಆಡಿದರೆ ಫಲವಿಲ್ಲ ಮಹಾರಾಜ. ನೀನು ಕ್ಷತ್ರಿಯಕುಲೋತ್ಪನ್ನ. ನಿನ್ನ ಕಲಿತನವನ್ನು ಈಗ ನಿನ್ನ ಇಂದ್ರಿಯಗಳನ್ನು ಜಯಿಸುವುದರ ಮೂಲಕ ತೋರಿಸು.
ಆ ವೇಳೆಗೆ ರಸವಂತಿ ಕಾಣಿಸಿಕೊಂಡಳು. ಅದನ್ನು ನೋಡಿ ಹೇಳಿದಳು ಮಹಾದೇವಿ : ಅದೋ ರಸವಂತಿ ಬರುತ್ತಿದ್ದಾಳೆ. ಚೆನ್ನಾಗಿ ಆಲೋಚಿಸು. ಅರಮನೆಯಿಂದ ಹೋಗಲು ನನಗೆ ಜಾಗ್ರತೆಯಾಗಿ ಅನುಮತಿ ಕೊಡು
ಎಂದು ಹೇಳುತ್ತಾ ಮಹಾದೇವಿ ಹೊರಟಳು. ಅವಳು ಹೋಗುವುದನ್ನೇ ನೋಡುತ್ತಾ ನಿಂತ ಕೌಶಿಕ. ಅವಳು ಮರೆಯಾಗಲು, ಅದೇ ಶಿಲಾಪೀಠದ ಮೇಲೆ ಕುಸಿದು ಕುಳಿತ.
10
ಬೆಳಗ್ಗೆ ಮಹಾದೇವಿಯ ಮನಸ್ಸು ಹಿಂದಿನ ದಿನದ ಘಟನೆಗಳೆಲ್ಲವನ್ನೂ ಮರೆತು ಸಂಭ್ರಮದಿಂದ ಕೂಡಿತ್ತು. ತನ್ನ ಆಹ್ವಾನವನ್ನು ಮನ್ನಿಸಿ ಜಂಗಮರು ಆಗಮಿಸುವ ದಿನ ಇಂದು.
ಕೌಶಿಕನಿಗೂ ಈ ವಿಷಯವನ್ನು ತಿಳಿಸಬೇಕೆಂದು ಅನ್ನಿಸಿತು ಆಕೆಗೆ. ಅವನನ್ನು ನೋಡಲು ಹೊರಟಳು. ಅಂತಃಪುರದ ಹೊರವಿಭಾಗದ ತೊಟ್ಟಿಯಲ್ಲಿ