ಗುರುಗಳು ನೆಟ್ಟಗೆ ಕುಳಿತುಕೊಂಡು ಮಾತನ್ನು ಮುಂದುವರಿಸಿದರು. ಅವರ ಮುಖದ ಮೇಲೆ ಉತ್ಸಾಹ ಮಿಂಚುತ್ತಿತ್ತು. ಸಂತೋಷಕರವಾದ ಆ ಯಾತ್ರೆಯ ಸ್ಮರಣೆಯಿಂದ.
"ಶ್ರೀಶೈಲಪರ್ವತ ಸಮೀಪಿಸುತ್ತಿದ್ದಂತೆಯೇ ಬಿಸಿಲ ತಾಪ, ಆಯಾಸ ಎಲ್ಲಾ ಮರೆತು ಹೋಗುತ್ತದೆ. ಅಂತಹುದೇನೋ ಅವ್ಯಕ್ತ ಶಕ್ತಿ ಅಲ್ಲಿನ ಕಲ್ಲು ಗುಡ್ಡಗಳಲ್ಲಿರುವಂತಿದೆ. ಶ್ರೀಶೈಲವನ್ನು ದೇಹಕ್ಕೆ ಹೋಲಿಸಿಕೊಂಡು ಹಾಡಿರುವ ಯೋಗಿಗಳ ಪರಿಭಾಷೆಯನ್ನು ಕೇಳಿದ್ದೆ. ಆಗ ನನಗೆ ಅದು ಅಷ್ಟು ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಆದರೆ ಶ್ರೀಶೈಲದ ಒಂದೊಂದು ಶೈಲವನ್ನೂ ಹತ್ತಿ ಇಳಿದು ದಾಟುತ್ತಾ ನಡೆದಂತೆ ಆ ಸತ್ಯವು ಅನುಭವಗೋಚರವಾಗುತ್ತದೆ. ಈ ಪ್ರಪಂಚವನ್ನು ದಾಟಿ ಯಾವುದೋ ಲೋಕಕ್ಕೆ ಹೋದಂತೆ ಅನಿಸುತ್ತದೆ. ಮರ್ತ್ಯಜಗತ್ತನ್ನು ಹಿಂದೆ ಬಿಟ್ಟು ಮಲ್ಲಿಕಾರ್ಜುನನ ಮುಕ್ತಿ ಮನೆಯನ್ನು ಹೊಕ್ಕಂತೆ ಭಾಸವಾಗುತ್ತದೆ. ಶ್ರೀಶೈಲ ಪರ್ವತಗಳ ಸೆರಗು ಆತ್ಮಕೂರನ್ನು ಬಿಟ್ಟೊಡನೆಯೇ ಪ್ರಾರಂಭವಾಗುತ್ತದೆ."
ಇಲ್ಲಿ ಗುರುಗಳ ಮಾತನ್ನು ತಡೆದಳು ಮಹಾದೇವಿ, ತನ್ನ ಪ್ರಶ್ನೆಯಿಂದ.
"ಎಂಥದು ಗುರುಗಳೇ? ಎಂಥ ಊರು ಅದು?"
{{gap"ಆತ್ಮಕೂರು. ಏಕೆ? ಹೆಸರು ಆಶ್ಚರ್ಯಕರವಾಗಿದೆಯಲ್ಲವೆ? ನನಗೂ ಹಾಗೆಯೇ ತೋರಿತು. ಅದು ಹೇಗೆ ಆ ಹೆಸರು ಬಂದಿತೋ ಆ ಊರಿಗೆ. ಅಲ್ಲೊಂದು ಮಠವಿದೆ, ಮಲ್ಲಿಕಾರ್ಜುನನ ದೇವಾಲಯವಿದೆ. ಶ್ರೀಶೈಲಕ್ಕೆ ನಡೆದು ಹೋಗಲಾರದವರು ಆತ್ಮಕೂರಿಗೆ ಹೋಗಿ ಅಲ್ಲಿರುವ ಮಲ್ಲಿಕಾರ್ಜುನನಿಗೆ ನಮಸ್ಕಾರ ಮಾಡಬಹುದು.
"ಆತ್ಮಕೂರಿನಿಂದ ನಮ್ಮ ಪರಿಷೆ ಹೊರಟಿತು. ಸ್ವಲ್ಪದೂರ ಹೋಗುವುದರೊಳಗೆ ಯಾರೋ ತೋರಿಸಿ ಹೇಳಿದರು, 'ಅದೋ ಶ್ರೀಶೈಲಪರ್ವತ' ಎಂದು. ತಲೆಯನ್ನು ಎತ್ತಿ ನಿಂತಿತ್ತು ಅನತಿದೂರದಲ್ಲಿಯೇ ಒಂದು ಪರ್ವತ. 'ಇಷ್ಟು ಹತ್ತಿರವೇ ಶ್ರೀಶೈಲ'ಎನಿಸಿತು. ಏಕೆಂದರೆ ಇದೆಲ್ಲಾ ನನಗೆ ಮೊದಲು ಗೊತ್ತಿರಲಿಲ್ಲ. ಅದನ್ನು ಏರತೊಡಗಿದೆವು.
"ಕಡಿದಾದ ಆ ಕಣಿವೆಯ ದಾರಿ, ಹೆಜ್ಜೆಹೆಜ್ಜೆಗೂ ನಮ್ಮನ್ನು ಮೇಲಕ್ಕೆ ಕೊಂಡೊಯ್ಯುತ್ತಿತ್ತು. ಪರಿಷೆಯ ಕೀರ್ತನೆಭಜನೆಗಳೆಲ್ಲಾ ಏರುವ ಆಯಾಸದಿಂದ ತಾವಾಗಿಯೇ ನಿಂತುಹೋಗಿದ್ದವು. ಆಗಾಗ 'ಮಹಾಂತ ಮಲ್ಲಯ್ಯಾ ಉಘೇ....ಉಘೇ..' ಎಂದು ಎಲ್ಲರೂ ಉದ್ಘೋಷಿಸುವ ಜಯಘೋಷ, ಬೆಟ್ಟವನ್ನೇರುವುದಕ್ಕೆ ಪ್ರೋತ್ಸಾಹವನ್ನು ಕೊಡುವಂತಿತ್ತು. ಆ ಪರ್ವತವನ್ನೇರಿ