ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೧೩೧


``ಅಣ್ಣನವರ ಮಾತುಗಳಲ್ಲಿ ಅಂದೆಂತಹ ಮಾಂತ್ರಿಕ ಶಕ್ತಿಯಿದೆ, ಮಹಾಸ್ವಾಮಿಗಳೇ ! ಮಹಾದೇವಿ ಮೌನವನ್ನು ಮಥಿಸಿದಳು.

``ಹೌದು, ತಾಯಿ. ಇಂತಹ ವಚನಗಳಿಂದ, ಇಂದು ಜನತೆಯಲ್ಲಿ ಒಂದು ದೊಡ್ಡ ಕ್ರಾಂತಿಯೇ ಆಗುತ್ತಿದೆ ಕಲ್ಯಾಣದಲ್ಲಿ. ಧರ್ಮವು ಸಾಮಾನ್ಯರ ಸೊತ್ತಾಗುತ್ತಿದೆ; ಪಾಪಿಗಳನ್ನು ಉದ್ಧರಿಸುತ್ತಿದೆ. ಅಲ್ಲದೆ ಬಸವಣ್ಣನವರ ವ್ಯಕ್ತಿತ್ವವೇ ಒಂದು ಅಪೂರ್ವವಾದ ಮಾಂತ್ರಿಕ ಶಕ್ತಿ. ಒಮ್ಮೆ ಅವರೊಡನೆ ನುಡಿದವರು, ಪರುಷಮಣಿಯ ಕೈಗೆ ಸಿಕ್ಕ ಕಬ್ಬಿಣದ ತುಂಡಿನಂತೆ ಪರಿವರ್ತಿತರಾಗುತ್ತಾರೆ. ಅಂತಹ ಆಧ್ಯಾತ್ಮಿಕ ಗಾರುಡಿಗ ಆತ. ಇಂದು ಅವರ ಕಾರ್ಯಕ್ಷೇತ್ರ ಅಪಾರವಾಗಿ ಬೆಳೆದಿದೆ. ಕಲ್ಯಾಣವು ಮಹಾಶಕ್ತಿಯ ಕೇಂದ್ರವಾಗಿದೆ ಎಂದು ಪ್ರಾರಂಭಿಸಿ ಸಂಗಮದೇವರು, ಬಣವಣ್ಣನವರ ಕಾರ್ಯಕ್ಷೇತ್ರದ ಪರಿಚಯವನ್ನು ಸಂಪೂರ್ಣವಾಗಿ ಮಾಡಿಕೊಟ್ಟರು. ಅಲ್ಲದೆ ಗಂಗಾಂಬಿಕೆ, ನೀಲಾಂಬಿಕೆ, ಲಕ್ಕಮ್ಮ, ಮಹಾದೇವಮ್ಮ ಮೊದಲಾದ ಶಿವಶರಣೆಯರನ್ನು ಕುರಿತು ಹೇಳಿದರು. ಹೆಣ್ಣನ್ನು ಕುರಿತು ಅಣ್ಣನವರ ಉದಾತ್ತ ಭಾವನೆಯನ್ನು ನಿರೂಪಿಸಿದರು.

ಅದನ್ನು ಕೇಳುತ್ತಿರುವಾಗಲಂತೂ ಮಹಾದೇವಿ ರೋಮಾಂಚಿತ ಳಾಗುತ್ತಿದ್ದಳು. ಹೆಣ್ಣಿಗೂ ಆಧ್ಯಾತ್ಮದಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟ ಬಸವಣ್ಣನನ್ನು ಕಾಣಲು ಅವಳ ಮನಸ್ಸು ಹಾತೊರೆಯತೊಡಗಿತ್ತು. ಅಣ್ಣನ ರಕ್ಷಣೆಯಲ್ಲಿ ಬೆಳೆದ ಮಹಿಳಾಸಾಧಕಿಯರ ಪುಣ್ಯ ಚಿತ್ರ ಅವಳ ಮಾನಸರಂಗದಲ್ಲಿ ನರ್ತಿಸತೊಡಗಿತ್ತು.

ಎಷ್ಟು ಕೇಳಿದರೂ ಮಹಾದೇವಿಗೆ ತೃಪ್ತಿಯಿಲ್ಲ. ಮತ್ತೆ ಮತ್ತೆ ಪ್ರಶ್ನಿಸಿ ವಿವರಗಳನ್ನು ತಿಳಿಯಲು ಪ್ರಯತ್ನಿಸುತ್ತಿದ್ದಳು. ಹಗಲು ಕತ್ತಲಾಗುತ್ತಾ ಬರುತ್ತಿದ್ದರೂ ಅದರತ್ತ ಗಮನವೇ ಇರಲಿಲ್ಲ. ದಾಸಿಯೊಬ್ಬಳು ದೀಪವನ್ನು ತಂದಿಟ್ಟಾಗಲೇ ಆಕೆಗೆ ಅರಿವಾದುದು ಕೋಣೆಯನ್ನು ಕತ್ತಲು ಆವರಿಸುತ್ತಿದೆಯೆಂದು. ಕೊನೆಗೆ ಸಂಗಮದೇವರು ಹೇಳಿದರು :

``ನಿನ್ನಂತಹ ಸಾಧಕಳಿಗೆ ಅದು ಅತ್ಯುತ್ತಮ ತಪೋರಂಗವಾಗುತ್ತದೆ, ತಾಯಿ. ನೂರಾರು ಸಾಧಕರು ನಿನ್ನ ಸಾಧನೆಯಿಂದ ಬೆಳಕನ್ನು ಕಂಡುಕೊಳ್ಳುತ್ತಾರೆ. ಮಹಾದೇವಿಯ ಮೈ ಪುಳಕಿತವಾಯಿತು. ಆದರೆ ಕಲ್ಯಾಣವೆಲ್ಲಿ ; ತಾನೆಲ್ಲಿ?

``ನೀವು ಕಲ್ಯಾಣದಿಂದ ಇಲ್ಲಿಗೆ ಬರಲು ಎಷ್ಟು ದಿನಗಳಾಯಿತು, ಸ್ವಾಮಿ? ಕೇಳಿದಳು ಸಂಗಮದೇವರನ್ನು.

``ನಾವು ಅಲ್ಲಲ್ಲಿ ಹೆಚ್ಚು ಕಾಲ ನಿಲ್ಲುತ್ತಾ ನಿಧಾನವಾಗಿ ಬಂದೆವು. ಅಲ್ಲಿಂದ ಹೊರಟು ಮೂರುನಾಲ್ಕು ತಿಂಗಳಾಗಿರಬಹುದು. ನೇರವಾಗಿ ಅಲ್ಲಿಗೇ