ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೨
ಕದಳಿಯ ಕರ್ಪೂರ


ಹೋಗಬೇಕೆಂಬ ಏಕೈಕಗುರಿಯಿಂದ ಹೊರಟರೆ ಹದಿನೈದಿಪ್ಪತ್ತು ದಿನಗಳು ಅಥವಾ ಹೆಚ್ಚೆಂದರೆ ಒಂದು ತಿಂಗಳೊಳಗಾಗಿ ಅಲ್ಲಿರಬಹುದು.

ಕ್ಷಣಕಾಲ ಮೌನವಾವರಿಸಿತು. ಮಹಾದೇವಿಯ ಮನಸ್ಸಿನಲ್ಲಿ ಯಾವುದೋ ಭಾವನೆ ತಿರುಗುತ್ತಿರುವಂತಿತ್ತು. ಅನಂತರ ಕೇಳಿದಳು :

``ತಮಗೆ ಶ್ರಮವಾಗದಿದ್ದರೆ ಇನ್ನೊಂದೆರಡು ವಚನಗಳನ್ನು ....

``ಕೇಳಮ್ಮ ; ಒಂದೆರಡಲ್ಲ ಹತ್ತಾರನ್ನು ಹೇಳುತ್ತೇವೆ. ಕೇಳುವವರಿದ್ದರೆ ಬೆಳಗಿನವರೆಗೂ ಬೇಕಾದರೂ ಹೇಳುತ್ತೇವೆ.

ಏಕನಾದದ ಜಂಗಮ ಆಗಲೇ ಪ್ರಾರಂಭಿಸಿದ್ದ ತನ್ನ ವಾದ್ಯದ ನಾದವನ್ನು. ಮಹಾದೇವಿ ಮೈಯೆಲ್ಲಾ ಕಿವಿಯಾಗಿ ಕುಳಿತಳು. ಸಂಗಮದೇವರು ಕ್ಷಣಕಾಲ ಆಲೋಚಿಸಿ ಪ್ರಾರಂಭಿಸಿದರು. ಅನಂತರ ಉಳಿದ ಜಂಗಮರೂ ಧ್ವನಿಗೂಡಿದರು.

ನೀನೊಲಿದರೆ ಕೊರಡು ಕೊನರುವುದಯ್ಯ,
ನೀನೊಲಿದರೆ ಬರಡು ಹಯನಹುದಯ್ಯ ;
ನೀನೊಲಿದರೆ ವಿಷವೆ ಅಮೃತವಹುದಯ್ಯ ;
ನೀನೊಲಿದರೆ ಸಕಲ ಪಡಿಪದಾರ್ಥ
ಇದಿರಲಿರ್ಪುವು ಕೂಡಲಸಂಗಮದೇವಾ.

ವಚನ ಮುಗಿಯಿತು. ಕ್ಷಣಕಾಲ ಮೌನವಾವರಿಸಿತು, ಏಕನಾದದ ಶ್ರುತಿಯೊಂದರ ವಿನಾ. ಮತ್ತೆ ಇನ್ನೊಂದನ್ನು ಪ್ರಾರಂಭಿಸಿದರು :

ವ್ಯಾಧನೊಂದು ಮೊಲವ ತಂದರೆ, ಸಲುವ ಹಾಗಕ್ಕೆ ಬಿಲಿವರಯ್ಯ
ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ
ಮೊಲನಿಂದ ಕರ ಕಷ್ಟ ನರನ ಬಾಳುವೆ,
ಸಲೆ ನಂಬೋ ನಮ್ಮ ಕೂಡಲಸಂಗಮದೇವನ.

ಅದಾದಮೇಲೆ ಇನ್ನೊಂದು :

ವಿಷಯವೆಂಬ ಹಸುರನ್ನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ ;
ಪಶುವೇನ ಬಲ್ಲುದು ? ಹಸುರೆಂದೆಳಸುವುದು.
ವಿಷಯರಹಿತನ ಮಾಡಿ, ಭಕ್ತಿ ರಸವ ದಣಿಯೆ ಮೇಯಿಸಿ
ಸುಬುದ್ಧಿಯೆಂಬುದಕವನೆರದು
ನೋಡಿ ಸಲಹಯ್ಯ ಕೂಡಲಸಂಗಮದೇವಾ.

ಕಣ್ಣುಮುಚ್ಚಿ ಧ್ಯಾನಾಸಕ್ತಳಾದಂತೆ ಮಹಾದೇವಿ ಇದನ್ನು ಕೇಳುತ್ತಿದ್ದಳು. ಇದು ಮುಗಿದೊಡನೆಯೇ :