``ಇದನ್ನು ಇನ್ನೊಮ್ಮೆ ಹೇಳಿ, ಸ್ವಾಮಿ ಎಂದು ಪ್ರಾರ್ಥಿಸಿದಳು.
ಉತ್ಸಾಹಿತರಾದ ಜಂಗಮರು ಮತ್ತೆ ಪ್ರಾರಂಭಿಸಿದರು ಮೊದಲಿನಿಂದ. ನಿಧಾನವಾಗಿ ಗಂಭೀರವಾಗಿ ಮುದುವರಿಯಿತು ವಚನ. ಮಹಾದೇವಿಯ ಆತ್ಮವೇ ಆ ವಚನದ ಅರ್ಥದಲ್ಲಿ ತೇಲಿದಂತಾಯಿತು. ತನ್ನ ಹೃದಯದ ಪ್ರಾರ್ಥನೆ ಅದರೊಡನೆ ಕೂಡಿ ಅವಳ ಶ್ರದ್ಧೆ ಬಲಿಯಿತು, ಆನಂದದಿಂದ ನಲಿಯಿತು.
ಇನ್ನು ಒಂದೆರಡು ಪ್ರಭುದೇವರ ವಚನಗಳನ್ನು ಹಾಡಿ ಕೊನೆಯಲ್ಲಿ ಈ ವಚನವನ್ನು ಎತ್ತಿಕೊಂಡಿದ್ದರು :
ಭಕ್ತಿಯೆಂಬ ನಿಧಾನವ ಸಾಧಿಸುವೊಡೆ
ಶಿವಪ್ರೇಮವೆಬಂಜನವ ನೆಚ್ಚಿಕೊಂಬುದು....
ಅಷ್ಟರಲ್ಲಿ ``ನಿಲ್ಲಿಸಿರಿ ಸಾಕು ಎಂಬ ಕಟುವಾದ ಮಾತನ್ನು ಕೇಳಿ ವಚನ ಅಷ್ಟಕ್ಕೇ ನಿಂತಿತು.
ತಲೆಯೆತ್ತಿ ನೋಡಿದರು ಜಂಗಮರು. ಮಹಾದೇವಿ ಬೆಚ್ಚಿದಳು. ರಸವಂತಿಯಂತೂ ಎದ್ದು ನಿಂತು ನಡುಗುತ್ತಿದ್ದಳು.
ಅಸಹನೆಯಿಂದ ಒಳಗೆ ನುಗ್ಗಿದ ಕೌಶಿಕ :
``ಏ ಬೈರಾಗಿಗಳೇ ! ಏನಿದು ನಾಟ್ಯ ಶಾಲೆಯೆಂದು ತಿಳಿದಿರಾ ? ಅತಿಥಿಗಳಾಗಿ ಬಂದವರು ಅತಿಥಿಗಳಂತೆ ಹೊರಟುಹೋಗಬೇಕು. ಮಧ್ಯರಾತ್ರಿಯಾದರೂ ನಿಮ್ಮ ಹಾಡು ಮುಗಿದಿಲ್ಲವೆ ?
``ಮಹಾರಾಜ ! - ಮೇಲೆದ್ದ ಮಹಾದೇವಿ ಕೋಪದಿಂದ ಗರ್ಜಿಸಿದಳು. ``ನಿನ್ನ ವಿವೇಕ ಎಲ್ಲಿ ಹೋಯಿತು ? ಜಂಗಮರನ್ನು ಇಷ್ಟು ಹೊತ್ತು ಇಲ್ಲಿರಲು ಪ್ರಾರ್ಥಿಸಿಕೊಂಡವಳು ನಾನು. ಅವರು ಇಲ್ಲಿರುವುದೇ ನಮ್ಮ ಪುಣ್ಯ. ಅವರೊಡನೆ ಈ ಉದ್ಧಟತನವೇ ? ಅವರಿಗೆ ಈ ಅಪಮಾನವೇ ?
``ಇರಲಿ ಬಿಡು, ಮಗಳೇ. ಕೋಪಗೊಳ್ಳಬೇಡ. ನಮಗೇನೂ ಅಪಮಾನವಾಗಿಲ್ಲ.
ಎಂದಿನಂತೆ ಶಾಂತಸ್ವರದಿಂದಲೇ ನುಡಿಯುತ್ತಾ ಸಂಗಮದೇವರು ಎದ್ದರು. ಉಳಿದ ಜಂಗಮರೂ ಎದ್ದು ನಿಂತರು. ಮಹಾದೇವಿ ಕೋಪವನ್ನು ಅಡಗಿಸಿಕೊಂಡು ಶಾಂತಸ್ವರದಿಂದ:
``ನನ್ನನ್ನು ಕ್ಷಮಿಸಬೇಕು, ಮಹಾಸ್ವಾಮಿ ಎನ್ನುತ್ತಾ ನಮಸ್ಕರಿಸಿದಳು ಸಂಗಮ ದೇವರಿಗೆ ಮತ್ತು ಇತರ ಜಂಗಮರಿಗೆ.