ಅಪರಾಧವನ್ನು ಮಾಡಿಬಿಟ್ಟೆ, ಜಂಗಮರನ್ನು ಅವಮಾನಗೊಳಿಸಿದ ಸಿಟ್ಟಿನಿಂದ ಹಾಗೆ ಹೇಳಿರಬಹುದು. ಅದಕ್ಕಾಗಿ ಅವಳ ಕ್ಷಮೆ ಬೇಡುತ್ತೇನೆ. ಆಗ ಅವಳ ಕೋಪ ಇಳಿದು ನನ್ನನ್ನು ಪ್ರೀತಿಸಬಹುದು' ಎಂದು ಮುಂತಾಗಿ ತನ್ನ ಮಾರ್ಗದಲ್ಲಿಯೇ ಹರಿಯುತ್ತಿತ್ತು ಕಾಮ ವಿಕಾರದಿಂದ ಕಂಗೆಟ್ಟ ಕೌಶಿಕನ ಮನಸ್ಸು.
ಈಗಲೇ, ಈ ರಾತ್ರಿಯೇ ಅವಳ ಬಳಿ ಹೋಗಿ ಕ್ಷಮೆ ಕೇಳಿಕೊಳ್ಳಬೇಕೆಂದು ಆಲೋಚಿಸಿದ. ಮತ್ತೆ ಅದನ್ನು ತಿದ್ದಿಕೊಂಡು,
``ಬೇಡ, ಈಗ ಇನ್ನೂ ಕೋಪದಲ್ಲಿರಬಹುದು. ಬೆಳಿಗ್ಗೆ ಅವಳ ಪೂಜೆ ಮುಗಿಯುವ ವೇಳೆಗೆ ಹೋಗುತ್ತೇನೆ. ಆಗ ಶಾಂತವಾದ ಅವಳ ಮನಸ್ಸಿನ ಮುಂದೆ ನನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ಮನಸ್ಸನ್ನು ಅವಳಿಗೆ ಸಂಪೂರ್ಣವಾಗಿ ತಿಳಿಸುತ್ತೇನೆ ಎಂದು ಮುಂತಾಗಿ ಆಲೋಚಿಸುತ್ತಾ ಆ ರಾತ್ರಿಯನ್ನು ಕಷ್ಟದಿಂದ ಕಳೆದ.
ಬೆಳಗಿನ ಪೂಜೆಯನ್ನು ಮುಗಿಸಿ ಮಹಾದೇವಿ, ಇಷ್ಟಲಿಂಗವನ್ನು ಎಂದಿನಂತೆ ಕಾವಿಬಟ್ಟೆಯಲ್ಲಿಟ್ಟು ಕಟ್ಟಿಕೊಳ್ಳುವ ವೇಳೆಗೆ ಕೌಶಿಕ ಪೂಜಾಗೃಹವನ್ನು ಪ್ರವೇಶಿಸಿದ.
ಪೂಜೆಯನ್ನು ಮುಗಿಸಿದ ಮಹಾದೇವಿ, ಪೂಜೆಯಲ್ಲಿ ಈ ದಿನ ಕಂಡ ವಿಶೇಷವಾದ ಅಲೌಕಿಕ ಅನುಭವವನ್ನು ಆಲೋಚಿಸುತ್ತಾ ಧ್ಯಾನಾಸಕ್ತಳಾಗಿ ಹಾಗೆಯೇ ಕಣ್ಣುಮುಚ್ಚಿ ಕುಳಿತಳು. ಸತ್ವಕಳೆಯೇ ಮೈವೆತ್ತು, ಆದಿಶಕ್ತಿಯ ಮಹಾಮೂರ್ತಿಯಂತೆ ಹೊಳೆಯುತ್ತಿದ್ದ ಮಹಾದೇವಿ ಕೌಶಿಕನ ಕಾಮುಕ ಕಣ್ಣಿಗೆ ಕಾಮನ ಪ್ರಾರ್ಥನೆಯಲ್ಲಿ ತೊಡಗಿದ ರತಿಯತೆ ಕಂಡಳು. ತಾನು ಬಂದ ಉದ್ದೇಶವನ್ನೇ ಮರೆತು ಹಿಂದಿನಿಂದ ಮೆಲ್ಲ ಮೆಲ್ಲನೆ ಹತ್ತಿರಕ್ಕೆ ಬರತೊಡಗಿದ. ಅವಳ ಅಂಗಾಂಗಗಳ ಸೌಂದರ್ಯವೆಲ್ಲಾ ಸಂಪೂರ್ಣವಾಗಿ ಗೋಚರಿಸುವಂತೆ, ಒಂದು ಪಕ್ಕಕ್ಕೆ ಸರಿದು ನಿಂತ.
ಅದೇತಾನೇ ಮಂಗಳಸ್ನಾನ ಮಾಡಿದ ಮಹಾದೇವಿಯ ಕೆದರಿದ ಕೂದಲುಗಳು ಬೆನ್ನಮೇಲೆಲ್ಲಾ ಹರಡಿದ್ದವು. ದಟ್ಟವಾಗಿ ಬೆಳೆದ ಮತ್ತು ಅತಿ ನೀಳವಾದ ಕೇಶರಾಶಿ, ಬೆನ್ನಮೇಲಿಂದ ಇಳಿದು ನೆಲದ ಮೇಲೂ ಹರಡಿ ಬಿದ್ದಿತ್ತು.
ಪೂಜೆಗಾಗಿ ಮಡಿಯುಟ್ಟು ಏಕವಸ್ತ್ರಧಾರಿಣಿಯಾಗಿ ಕುಳಿತಿದ್ದುದರಿಂದ ದುಂಡು ದುಂಡಾದ ಅವಳ ತೋಳಿನ ಬಹು ಭಾಗವೆಲ್ಲಾ ಗೋಚರಿಸುತ್ತಿತ್ತು. ಧ್ಯಾನದಲ್ಲಿ ತನ್ಮಯಳಾದ ಮಹಾದೇವಿಯ ಸೆರಗು ಜಾರಿತ್ತು. ತೀರಾ ಸಮೀಪಕ್ಕೆ ಬಂದು, ಒಂದು ಪಕ್ಕಕ್ಕೆ ಸರಿದು ನಿಂತ ಕೌಶಿಕನ ದೃಷ್ಟಿ ಸ್ವೇಚ್ಛೆಯಾಗಿ ಮನಬಂದಂತೆ